ನವದೆಹಲಿ, ಮೇ 20(DaijiworldNews/AA): ಸರ್ವಾಧಿಕಾರ, ಅನ್ಯಾಯ, ದಬ್ಬಾಳಿಕೆಗಾಗಿ ಅಲ್ಲ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಮತ ಚಲಾಯಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ನಾವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಬೇಕಾದರೆ, ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ಇವಿಎಂ ಗುಂಡಿ ಒತ್ತುವ ಮೊದಲು ನಾವು ದ್ವೇಷಕ್ಕಾಗಿ ಅಲ್ಲ, ಪ್ರೀತಿ ಮತ್ತು ಸಹೋದರತ್ವಕ್ಕಾಗಿ ಮತ ಚಲಾಯಿಸಬೇಕು ಎಂದು ನೆನಪಿನಲ್ಲಿ ಇಟ್ಟುಕೊಳ್ಳಿ. ನಿರುದ್ಯೋಗ ಮತ್ತು ಹಣದುಬ್ಬರದ ವಿರುದ್ಧ ಮತ ಚಲಾಯಿಸಿ. ಕೆಲವು ಬಂಡವಾಳಶಾಹಿಗಳನ್ನು ಶ್ರೀಮಂತರನ್ನಾಗಿ ಮಾಡುವುದಕ್ಕೆ ಮಾತ್ರವಲ್ಲ, ನಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ನಾವು ಮತ ಚಲಾಯಿಸಬೇಕೇ ಹೊರತು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವವರಿಗೆ ಅಲ್ಲ ಎಂದು ಬರೆದುಕೊಂಡಿದ್ದಾರೆ.
ನಾವು ಘೋಷಿಸಿರುವ 'ರೈತ ನ್ಯಾಯ', 'ಯುವ ನ್ಯಾಯ', 'ನಾರಿ ನ್ಯಾಯ', 'ಶ್ರಮಿಕ ನ್ಯಾಯ' ಹಾಗೂ 'ಭಾಗಿದಾರರ ನ್ಯಾಯ' ಎಂಬ ಐದು ಗ್ಯಾರಂಟಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮತ ಚಲಾಯಿಸಿ. ಇದರಿಂದಾಗಿ ಈಗಾಗಲೇ ಅಸ್ಥಿರವಾಗಿರುವ ಸರ್ವಾಧಿಕಾರದ ಕುರ್ಚಿಗೆ ಮತ್ತೊಂದು ಹಿನ್ನಡೆಯಾಗಲಿದೆ ಮತ್ತು ಪ್ರಜಾಪ್ರಭುತ್ವವು ಬಲಗೊಳ್ಳಲಿದೆ ಎಂದು ಹೇಳಿದ್ದಾರೆ.
4 ಹಂತಗಳ ಮತದಾನ ಗಮನಿಸಿದರೆ ಸರ್ವಾಧಿಕಾರಿ ಮೋದಿ ಅವರು ನಿರ್ಗಮಿಸುವುದು ಖಚಿತವಾಗಿದೆ. ಇಂದು ನಡೆಯುತ್ತಿರುವ ಮತದಾನ ಮೋದಿಯವರ ವಿದಾಯಕ್ಕೆ 5ನೇ ಹೆಜ್ಜೆಯಾಗಲಿದೆ. ದೇಶದಲ್ಲಿ ಜೂನ್ 4ರಿಂದ ಹೊಸ ಶಕೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.