ನವದೆಹಲಿ, ಮೇ 20(DaijiworldNews/ AA): ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಇಂದು ಆರಂಭಗೊAಡಿದ್ದು, 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಒಟ್ಟು 49 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಐದನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಒಡಿಶಾದ 5, ಬಿಹಾರದ 5, ಜಾರ್ಖಂಡ್ನ 3, ಜಮ್ಮು ಮತ್ತು ಕಾಶ್ಮೀರದ ಒಂದು ಮತ್ತು ಲಡಾಖ್ನ ಒಂದು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ ರಾಯ್ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೇಠಿ ಕ್ಷೇತ್ರದಿಂದ ಬಿಜೆಪಿಯ ಸ್ಮೃತಿ ಇರಾನಿ, ಲಖನೌ ಕ್ಷೇತ್ರದಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಮುಂಬೈ ಉತ್ತರ ಕ್ಷೇತ್ರದಿಂದ ಕೇಂದ್ರ ಸಚಿವ ಪೀಯೂಷ್ ಗೋಯಲ್, ಬಾರಾಮುಲ್ಲಾ ಕ್ಷೇತ್ರದಿಂದ ಒಮರ್ ಅಬ್ದುಲ್ಲಾ ಹಾಗೂ ಸಾರಣ್ ಕ್ಷೇತ್ರದಿಂದ ಆರ್ಜೆಡಿಯ ರೋಹಿಣಿ ಆಚಾರ್ಯ ಅವರು ಕಣಕ್ಕಿಳಿದಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಮುಂಬೈ ಉತ್ತರ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪೀಯೂಷ್ ಗೋಯಲ್, ಲಖನೌ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಮತ ಚಲಾಯಿಸಿದ್ದಾರೆ. ಇನ್ನು ಮುಂಬೈಯಲ್ಲಿ ಉದ್ಯಮಿ ಅನಿಲ್ ಅಂಬಾನಿ, ಬಾಲಿವುಡ್ ನಟ ಅಕ್ಷಯ್ ಕುಮಾರ್, ಫರ್ಹಾನ್ ಅಖರ್ ಅವರು ಮತದಾನ ಮಾಡಿದ್ದಾರೆ.
ಐದನೇ ಹಂತದಲ್ಲಿ 8.95 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. ಒಟ್ಟು 94372 ಮತಗಟ್ಟೆಗಳನ್ನು ರಚಿಸಲಾಗಿದ್ದು, ಇದರಲ್ಲಿ 9.47 ಲಕ್ಷ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.