ಹೈದರಾಬಾದ್, ಮೇ 18 (DaijiworldNews/MS): ಕೆಲ ದಿನಗಳ ಹಿಂದಷ್ಟೇ ಕನ್ನಡ ಹಾಗೂ ತೆಲುಗು ಕಿರುತೆರೆಯ ಜನಪ್ರಿಯ ನಟಿಯಾದ ಪವಿತ್ರ ಜಯರಾಂ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟು ಅವರ ಸ್ನೇಹಿತ ಹಾಗೂ ನಟ ಚಂದು ಗಂಭೀರ ಗಾಯಗೊಂಡಿದ್ದರು. ಆದರೇ ಇದೀಗ ನಟಿ ಪವಿತ್ರಾ ಜಯರಾಮ್ ಸಾವಿನಿಂದ ಮನನೊಂದು ಕಿರುತೆರೆ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
'ಕಾರ್ತಿಕ ದೀಪಂ', 'ರಾಧಮ್ಮ ಪೆಲ್ಲಿ', 'ತ್ರಿನಯನಿ' ಮತ್ತು ಇತರ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಚಂದು ಅವರು ಮೇ 12 ರಂದು ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟಿವಿ ನಟಿ ಪವಿತ್ರಾ ಜಯರಾಮ್ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.
ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತ್ರಿನಯನಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಚಂದು ಹೆಸರುವಾಸಿಯಾಗಿದ್ದಾರೆ. 2015 ರಲ್ಲಿ ಶಿಲ್ಪಾ ಎಂವರವರನ್ನು ಪ್ರೀತಿಸಿ ಚಂದು ಮದುವೆಯಾಗಿದ್ದು ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಆದರೆ ಬಳಿಕ ದೂರವಾಗಿದ್ದರು ಎನ್ನಲಾಗಿದೆ.
ಚಂದು ಕಳೆದ ಆರು ವರ್ಷಗಳಿಂದ ಕಿರುತೆರೆ ನಟಿ ಪವಿತ್ರಾ ಜಯರಾಮ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲು ಬಯಸಿದ್ದರು. ಆದರೆ, ಈ ಮಧ್ಯೆ ಪವಿತ್ರಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆಕೆ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದೇ ಅಪಘಾತದಲ್ಲಿ ಚಂದು ಕೂಡ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಮಧ್ಯೆ ಅವರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿರುವ ಚಂದು, ಪವಿತ್ರ ಜಯರಾಂ ಅವರೊಂದಿಗಿನ ಫೋಟೋಗಳನ್ನು ಶೇರ್ ಮಾಡಿ, 'ನಾನ.. ಪ್ಲೀಸ್ ವೈಟ್ ಫಾರ್ ಜಸ್ಟ್ ಟು ಡೇಸ್' ಎಂದು ಬರೆದುಕೊಂಡಿದ್ದರು