ನವದೆಹಲಿ, ಮೇ. 17(DaijiworldNews/AK): ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎನ್ನುವ ಸ್ವಾತಿ ಮಲಿವಾಲ್ ಅವರ ಆರೋಪ ಸುಳ್ಳು. ಇದು ಬಿಜೆಪಿಯ ಒಳಸಂಚು, ಆ ದಿನ ಸ್ವಾತಿ ಮಲಿವಾಲ್ರನ್ನ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ ಎಂದು ಸಚಿವೆ ಅತಿಶಿ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ವಿರುದ್ಧ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮಾಡುತ್ತಿರುವ ಆರೋಪಗಳೆಲ್ಲವೂ ಆಧಾರ ರಹಿತ ಮತ್ತು ಸುಳ್ಳು. ಇದು ಬಿಜೆಪಿಯ ಸಂಚು ಎಂದು ಅಲ್ಲಗಳೆದಿದ್ದಾರೆ.
ಈ ಆರೋಪವು ಬಿಜೆಪಿ ಒಳಸಂಚು, ಸ್ವಾತಿ ಮಲಿವಾಲ್ ಅದರ ಮುಖವಾಡ. ಮೇ 13ರಂದು ಬೆಳಗ್ಗೆ ಕೇಜ್ರಿವಾಲ್ ನಿವಾಸಕ್ಕೆ ಮಲಿವಾಲ್ರನ್ನ ಕಳುಹಿಸಿದ್ದೇ ಬಿಜೆಪಿ. ಮುಖ್ಯವಾಗಿ ಸ್ವಾತಿಗೆ ಸಿಎಂ ಮೇಲೆಯೇ ಆರೋಪ ಮಾಡುವ ಉದ್ದೇಶವಿತ್ತು. ಆದರೆ ಸಿಎಂ ಇಲ್ಲದಿದ್ದ ಕಾರಣ ಬಚಾವ್ ಆಗಿದ್ದಾರೆ. ಸಿಎಂ ಇಲ್ಲದಿದ್ದರಿಂದ ಅವರ ಆಪ್ತ ಸಹಾಯಕನ ವಿರುದ್ಧ ದೂರು ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.