ಹುಬ್ಬಳ್ಳಿ, ಮೇ. 17(DaijiworldNews/AK): ರಾಜ್ಯದಲ್ಲಿ ಅಪರಾಧ ಕೃತ್ಯಗಳು, ಕೊಲೆ ಪ್ರಕರಣಗಳು ಹೆಚ್ಚುತ್ತಿರುವ ವಿಚಾರವಾಗಿ ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದು, ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಅಂಜಲಿ ಕೊಲೆ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಇರುವುದು ನಿಜ ಎಂದು ಗೃಹ ಸಚಿವ ಜಿ ಪರಮೇಶ್ವರ ಒಪ್ಪಿಕೊಂಡ ಬೆನ್ನಲ್ಲೇ ರವಿಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜಲಿ ಅಂಬಿಗೇರ ಹತ್ಯೆ ಆಗಿರೋದು ಕಾಡಿನಲ್ಲಿ ಅಲ್ಲ. ಆಕೆ ಕೊಲೆಯಾಗಿದ್ದು ಜನವಸತಿ ಪ್ರದೇಶದಲ್ಲಿ. ಈ ವಿಚಾರದಲ್ಲಿ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸಿದೆ. ಇದು ಅಸಮರ್ಥ ಸರ್ಕಾರ. ಇದು ರಣ ಹೇಡಿ ಸರ್ಕಾರ. ಕೊಲೆ ಪಾತಕರನ್ನು ರಕ್ಷಣೆ ಮಾಡುವ ಸರ್ಕಾರ ಎಂದು ರವಿಕುಮಾರ್ ಕಿಡಿಕಾರಿದ್ದಾರೆ.
ನೇಹಾ ಹಿರೇಮಠ ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹದೇ ಕೊಲೆಯಾಗಿದೆ ಅಂದರೆ ಏನರ್ಥ? ಈ ಕೊಲೆಗಳಿಗೆ ಪೊಲೀಸರು ಹೊಣೆ. ಕರ್ನಾಟಕ ಕ್ರೈಂ ರಾಜ್ಯ, ಕೊಲೆಪಾತಕರ ರಾಜ್ಯ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.