ಬೆಂಗಳೂರು, ಮೇ. 17(DaijiworldNews/AA): ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಸೆಕ್ಯೂರ್ ಮಾಡಿ ಬೆಂಗಳೂರಿಗೆ ಕರೆತರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣವೊಂದು ತನಿಖೆಯ ಹಂತದಲ್ಲಿರುವಾಗ ವಿವರಗಳನನ್ನು ಬಹಿರಂಗಗೊಳಿಸಲಾಗಲ್ಲ, ಅದು ಕುಮಾರಸ್ವಾಮಿಯವರಿಗೂ ಗೊತ್ತಿದೆ, ಮಂಡ್ಯದ ಶಾಸಕರಿಗೆ ಯಾರೂ ವಿಷಯವನ್ನು ಬ್ರೀಫ್ ಮಾಡಲ್ಲ, ಒಂದು ಸರ್ಕಾರದ ಭಾಗವಾಗಿ ನಮಗೆ ಜವಾಬ್ದಾರಿಗಳಿವೆ, ಎಸ್ಐಟಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಮರ್ಥವಾಗಿ ತನಿಖೆ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಇಂಥ ಪ್ರಕರಣಗಳನ್ನು ಹಗುರವಾಗಿ ಪರಿಗಣಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷಗಳ ನಾಯಕರು ಹಾಗೆ ಆರೋಪಗಳನ್ನು ಮಾಡುತ್ತಿರುತ್ತಾರೆ. ಅವರ ಕೆಲಸವೇ ಅದು, ಆದರೆ ನಾವು ನಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವೆ. ಎಸ್ಐಟಿ ಅಧಿಕಾರಿಗಳು ಅಗತ್ಯವಿರುವಾಗ ಸಿಎಂ ಇಲ್ಲವೇ ತನಗೆ ಪ್ರಕರಣದ ವಿವರ ನೀಡುತ್ತಾರೆ ಎಂದರು.