ಬೆಂಗಳೂರು, ಮೇ. 15(DaijiworldNews/AK): ಮಾಜಿ ಸಚಿವ ರೇವಣ್ಣ ಅವರನ್ನು ಕೂಡಲೇ ಬಂಧಿಸಿದ್ದರೂ, ಚಾಲಕನನ್ನು ಮಾತ್ರ ಬಂಧಿಸಿಲ್ಲ. ಎಸ್ಐಟಿ ಅಧಿಕಾರಿಗಳು ಪಕ್ಷಪಾತ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರು ಹೇಳಿದಂತೆ ಇಲ್ಲಿ ತಿಮಿಂಗಿಲವೇ ಇದೆ. ಅದನ್ನು ಬಡಿದು ತಿನ್ನಬೇಕಾ ಬೇಡವಾ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬ ತೀರ್ಮಾನಿಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಆಶೋಕ್ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ. ಇದನ್ನು ಬಿಜೆಪಿ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್ನ ಹಿರಿಯ ನಾಯಕರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಇಡೀ ಒಕ್ಕಲಿಗ ಸಮುದಾಯವನ್ನು ಅಪಮಾನಿಸಬೇಕಿತ್ತೇ ಎಂದು ಜನರು ಮಾತನಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯ ಮೇಲೆ ಆರೋಪ ತರುವ ಪ್ರಯತ್ನ ನಡೆದಿದೆ ಎಂದರು.ತನಿಖೆಯ ಪ್ರತಿ ಮಾಹಿತಿ ಮೊದಲು ಕಾಂಗ್ರೆಸ್ ನಾಯಕರಿಗೆ ತಲುಪುತ್ತಿದೆ. ಎಸ್ಐಟಿ ಅಧಿಕಾರಿಗಳು ಕಾಂಗ್ರೆಸ್ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆ ನಂತರ ಯಾರೆಲ್ಲಾ ಬಂಧನಕ್ಕೊಳಗಾಗುತ್ತಾರೆ ಎಂದು ನೋಡಲಿ ಎಂದು ಕಿಡಿಕಾರಿದರು.
ಕಾರು ಚಾಲಕ ಎಲ್ಲೋ ನಿಂತು ಸಂದೇಶ ಕಳುಹಿಸುತ್ತಿದ್ದಾನೆ. ಶಾಸಕ ಮಂಜು ಸೇರಿದಂತೆ ಹಲವರ ಮೇಲೆ ಆರೋಪ ಮಾಡಲಾಗಿದೆ. ಕಾಂಗ್ರೆಸ್ನವರೇ ಚಾಲಕನನ್ನು ಎಲ್ಲೋ ಇರಿಸಿದ್ದಾರೆ. ಹಾಸನದಲ್ಲಿ ಎಲ್ಲಾ ಕಡೆ ಪೆನ್ಡ್ರೈವ್ ಹಂಚಲಾಗಿದೆ ಎಂದ ಮೇಲೆ ಅದು ಬಿಜೆಪಿ ಕಾರ್ಯಕರ್ತರಿಗೆ ತಲುಪಿರಬಹುದು. ಆದರೆ ಕಾಂಗ್ರೆಸ್ ಕಾರ್ಯಕರ್ತರ ಬಳಿಯೂ ವೀಡಿಯೋ ಇದೆ. ಆ ರೀತಿಯಲ್ಲಿ ನೋಡುವುದಾದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡ ಬಂಧಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.