ಬೆಂಗಳೂರು, ಮೇ. 15(DaijiworldNews/AK):ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಒಂದು ವರ್ಷದ ಅವಧಿಯನ್ನು ಅಸಮರ್ಥ ಸಂಪುಟ, ಅಭಿವೃದ್ಧಿ ಶೂನ್ಯ ಸರಕಾರ ಎಂದು ವಿಶ್ಲೇಷಿಸಬಹುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮುಗಿದು ಸರಕಾರ ರಚನೆಯಾಗಿ ಒಂದು ವರ್ಷ ಮುಗಿಯುತ್ತಿದೆ. ಗೊತ್ತುಗುರಿ ಇಲ್ಲದ ಆಡಳಿತವನ್ನು ಕರ್ನಾಟಕದ ಜನತೆ ಕಳೆದ ಒಂದು ವರ್ಷದಲ್ಲಿ ನೋಡಿದ್ದಾರೆ. ಅಭಿವೃದ್ಧಿ ಶೂನ್ಯ ಸರಕಾರ ಇದು ಎಂದು ಟೀಕಿಸಿದರು.
ಈ ಒಂದು ವರ್ಷದ ಅವಧಿಯಲ್ಲಿ ಯಾವ ಯೋಜನೆಗೆ ಅನುದಾನ ಕೊಟ್ಟಿದ್ದಾರೆ ಎಂಬ ಮಾಹಿತಿಯನ್ನು ಸರಕಾರ ಬಿಡುಗಡೆ ಮಾಡಬೇಕು. ಸ್ಥಳೀಯ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಯಾವ ಯೋಜನೆಗಳಿಗೆ, ಎಷ್ಟು ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಕೊಟ್ಟಿದ್ದಾರೆ ಎಂದು ಸರಕಾರ ಬಹಿರಂಗಪಡಿಸಿದರೆ ಸಾಕು ಎಂದು ವ್ಯಂಗ್ಯವಾಗಿ ನುಡಿದರು.
ಇಂಥ ಅಭಿವೃದ್ಧಿಶೂನ್ಯ ಆಡಳಿತ, ಸರಕಾರವನ್ನು ಕರ್ನಾಟಕದ ಜನತೆ ಯಾವತ್ತೂ ನೋಡಿರಲಿಲ್ಲ. ವಿಧಾನಸಭಾ ಕ್ಷೇತ್ರಗಳು, ಇಲಾಖೆಗಳಿಗೆ ಒಂದು ರೂಪಾಯಿ ಅನುದಾನವನ್ನೂ ಕೊಡದೆ ಒಂದು ವರ್ಷ ಕಾಲವನ್ನು ಈ ಸರಕಾರ ಕಳೆದಿದೆ. ನಾವೆಲ್ಲ ಶಾಸಕರು ಒಂದು ವರ್ಷದಿಂದ ಒಂದು ಗುದ್ದಲಿ ಪೂಜೆ ಮಾಡಲಾಗಿಲ್ಲ. ಒಂದು ಅನುದಾನ ಬಂದಿದೆ ಎಂದು ಜನರ ಹತ್ತಿರ ಹೋಗಲೂ ಆಗಿಲ್ಲ ಎಂದು ವಿವರಿಸಿದರು.
ಸರಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ.ಜನರು ಕೂಡ ಈ ಸರಕಾರದಿಂದ ಅನುದಾನ ಬರುವುದಿಲ್ಲ ಎಂಬಷ್ಟರ ಮಟ್ಟಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ಮತ್ತು ಸಂಪುಟವನ್ನು ಗಮನಿಸಿದರೆ ಇಡೀ ಸಂಪುಟವೇ ಅಸಮರ್ಥವಾಗಿದೆ. ಸಚಿವರ ಮೇಲೆ ಹಿಡಿತವಿಲ್ಲದೆ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಯೋಜನೆ ರೂಪಿಸುವುದರಲ್ಲಿ ಮುಖ್ಯಮಂತ್ರಿಗಳು ಅಸಮರ್ಥವಾಗಿದ್ದಾರೆ. ಸರಕಾರಿ ನೌಕರರಿಗೆ ಸಂಬಳ ಸಿಗುತ್ತಿಲ್ಲ ಅನ್ನುವಷ್ಟರ ಮಟ್ಟಿಗೆ ಅಸಮರ್ಥ ಮುಖ್ಯಮಂತ್ರಿಯ ಆಡಳಿತವನ್ನು ಕರ್ನಾಟಕದಲ್ಲಿ ನೋಡುತ್ತಿದ್ದೇವೆ ಎಂದು ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಕಾನೂನು, ಸುವ್ಯವಸ್ಥೆ ನಿಭಾಯಿಸುವುದರಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಬರ ಪರಿಹಾರದಲ್ಲಿ ಕಂದಾಯ ಸಚಿವರು ಎಷ್ಟು ದೊಡ್ಡ ಪ್ರಮಾಣದಲ್ಲಿ ವೈಫಲ್ಯ ಕಂಡಿದ್ದಾರೆಂದರೆ ಮಂತ್ರಿಮಂಡಲದ ಒಬ್ಬ ಸದಸ್ಯರೂ ಬರ ಪರಿಹಾರದ ಸ್ಥಳಕ್ಕೆ ಭೇಟಿ ಕೊಟ್ಟಿಲ್ಲ ಎಂದು ಅವರು ಆಕ್ಷೇಪಿಸಿದರು. ಹಣ ಬಿಡುಗಡೆ ಮಾಡಿಲ್ಲ. ಕಂದಾಯ ಸಚಿವರಿಂದ ಗ್ರಾಮೀಣಾಭಿವೃದ್ಧಿ ಸಚಿವರವರೆಗೆ ಎಲ್ಲ ಸಂಪುಟವು ಬರ ಪರಿಹಾರದ ನಿರ್ವಹಣೆಯಲ್ಲಿ ಅಸಮರ್ಥವಾಗಿದೆ ಎಂದು ಟೀಕಿಸಿದರು