ಲಕ್ನೋ, ಮೇ 13 (DaijiworldNews/ AK): ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ. ರಾಯ್ ಬರೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಹುಲ್ ಗಾಂಧಿ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
2024 ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಇಂದು ಉತ್ತರ ಪ್ರದೇಶ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಉದ್ದೇಶಿಸಿ ಮಾತನಾಡಿದ್ದಾರೆ.
ರಾಹುಲ್ ಗಾಂಧಿಯವರ ಭಾಷಣದ ಕೊನೆಗೆ ಸಾರ್ವಜನಿಕರು ಅವರ ವೈವಾಹಿಕ ಜೀವನದ ಬಗ್ಗೆ ಕೇಳಿದ್ದಾರೆ. ನೀವು ಯಾವಾಗ ಮದುವೆಯಾಗುತ್ತೀರಿ ಎಂದು ಅಲ್ಲಿನ ಜನ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ರಾಹುಲ್, ಈಗ ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ ಎಂದು ವೇದಿಕೆಯಿಂದ ತೆರಳಿದರು.
ರಾಹುಲ್ ಗಾಂಧಿಯವರು ಈ ಹಿಂದೆಯೂ ತಮ್ಮ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.ರಾಯ್ ಬರೇಲಿಯಲ್ಲಿ ನಡೆದ ರ್ಯಾಲಿಯಲ್ಲಿ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು .