ಗುಂಟೂರು, ಮೇ 13 (DaijiworldNews/MS): ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನ ನಡೆಯುತ್ತಿದ್ದು, ಅತ್ತ ಆಂಧ್ರ ಪ್ರದೇಶದಲ್ಲಿ ಮತದಾರನೋರ್ವನಿಗೆ ಶಾಸಕ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ತೆನಾಲಿ ಶಾಸಕ ಮತ್ತು ವೈಸಿಪಿ ಅಭ್ಯರ್ಥಿ ಅನ್ನಬತುನಿ ಶಿವಕುಮಾರ್ ತನ್ನ ಕಾರ್ಯಕರ್ತರೊಂದಿಗೆ ಇಂದು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದಾರೆ. ಈ ವೇಳೆ ಮತದಾರರೊಂದಿಗೆ ಸರತಿ ಸಾಲಲ್ಲಿ ನಿಲ್ಲದೇ ನೇರವಾಗಿ ಮತಗಟ್ಟೆಯೊಳಗೇ ಪ್ರವೇಶ ಮಾಡಲು ಯತ್ನಿಸಿದ್ದಾರೆ. ಇದನ್ನು ಕಂಡ ಮತದಾರರೊಬ್ಬರು ಅದನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕ ಶಿವಕುಮಾರ್ ನೋಡ ನೋಡುತ್ತಲೇ ಪ್ರಶ್ನಿಸಿದ ಮತದಾರನ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಮತದಾರ ಕೂಡ ಶಾಸಕ ಶಿವಕುಮಾರ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರು ಹಿಂದೆ ಮುಂದೆ ನೋಡದೆ ಮತದಾರನ ಮೇಲೆ ಮುಗಿಬಿದ್ದು ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮತದಾರನನ್ನು ಹೊರಗೆ ಎಳೆದೊಯ್ದಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ನಿಯಂತ್ರಿಸಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಶಾಸಕನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.