ನವದೆಹಲಿ, ಮೇ.12(DaijiworldNews/AK): ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ನಡೆಸಿದರು.
ಈ ವೇಳೆ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಬಳಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲು ಮತ ಚಲಾಯಿಸಬೇಕೆಂದು ಮನವಿ ಮಾಡಿದ ಅವರು, ತಾವು ವಾಪಾಸ್ ತಿಹಾರ್ ಜೈಲಿಗೆ ಹೋಗದಂತೆ ರಕ್ಷಿಸಲು ಲೋಕಸಭೆ ಚುನಾವಣೆಯಲ್ಲಿ ತಮ್ಮ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡುವಂತೆ ಜನರನ್ನು ಒತ್ತಾಯಿಸಿದ್ದಾರೆ.
20 ದಿನಗಳ ಬಳಿಕ ನಾನು ಮತ್ತೆ ಜೈಲಿಗೆ ಹೋಗಬೇಕಾಗಿದೆ. ನೀವು ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ಗೆಲ್ಲಿಸಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಜೂನ್ 2ರಂದು ಅವರ ಜಾಮೀನು ಅವಧಿ ಮುಕ್ತಾಯವಾಗಲಿದೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೇಜ್ರಿವಾಲ್, ದೆಹಲಿಯ ಜನರಿಗಾಗಿ ಕೆಲಸ ಮಾಡಿದ ಕಾರಣ ನನ್ನನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು. ನನ್ನ ತಪ್ಪು ನಾನು ದೆಹಲಿ-ಎನ್ಸಿಆರ್ಗಾಗಿ ಶಾಲೆಗಳನ್ನು ನಿರ್ಮಿಸಿದ್ದೇನೆ. ನಾನು ನಿಮಗಾಗಿ ಕೆಲಸ ಮಾಡಿದ್ದರಿಂದ ಅವರು ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ. ದೆಹಲಿ ಜನರ ಕೆಲಸ ಮಾಡುವುದನ್ನು ಬಿಜೆಪಿ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಿಗೆ ಮೇ 25ರಂದು 6ನೇ ಹಂತದಲ್ಲಿ ಮತದಾನ ನಡೆಯಲಿದೆ.