ನವದೆಹಲಿ, ಮೇ 11(DaijiworldNews/MS): ಸೈಬರ್ ಕ್ರೈಂನಲ್ಲಿ ಭಾಗಿಯಾಗಿರುವ ಹಿನ್ನಲೆ ದೇಶಾದ್ಯಂತ 28 ಸಾವಿರಕ್ಕೂ ಹೆಚ್ಚು ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಬ್ಲಾಕ್ ಮಾಡುವಂತೆ ಟೆಲಿಕಮ್ಯೂನಿಕೇಶನ್ಸ್ ಇಲಾಖೆಯು ಎಲ್ಲ ಟೆಲಿಕಾಂ ಆಪರೇಟರ್ಗಳಿಗೆ ಸೂಚನೆ ನೀಡಿದೆ.
ಸೈಬರ್ಕ್ರೈಮ್ನಲ್ಲಿ ಭಾಗಿಯಾದ ಆರೋಪದಡಿ ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಬ್ಲಾಕ್ ಮಾಡುವಂತೆ ದೂರಸಂಪರ್ಕ ಇಲಾಖೆ (DoT) ನಿರ್ದೇಶಿಸಿದ್ದು, ಇದಲ್ಲದೇ ಅವುಗಳ ಈ ಹ್ಯಾಂಡ್ಸೆಟ್ಗಳಿಗೆ ಲಿಂಕ್ ಮಾಡಲಾದ 20 ಲಕ್ಷ ಸಿಮ್ ಸಂಪರ್ಕಗಳ ಮರುಪರಿಶೀಲನೆಯನ್ನು ಕೈಗೊಳ್ಳಲು ಇಲಾಖೆಯು ಟೆಲಿಕಾಂಗಳನ್ನು ಕೇಳಿದೆ.
ದೂರಸಂಪರ್ಕ ಇಲಾಖೆ, ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಸೈಬರ್ ಕ್ರೈಂ ವಿರುದ್ಧ ಸಮರ ಸಾರಿದ್ದು ಸೈಬರ್-ಕ್ರೈಮ್ ಮತ್ತು ಹಣಕಾಸು ವಂಚನೆಗಳಲ್ಲಿ ಟೆಲಿಕಾಂ ಸಂಪನ್ಮೂಲಗಳ ದುರುಪಯೋಗವನ್ನು ತಡೆಯಲು ಮುಂದಾಗಿದೆ. ಡಿಜಿಟಲ್ ಅಪಾಯದಿಂದ ಜನರನ್ನು ಕಾಪಾಡುವುದೇ ಇದರ ಮೂಲ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ದೂರಸಂಪರ್ಕ ಇಲಾಖೆಯ ವಿಶ್ಲೇಷಣೆಯಲ್ಲಿ 28,200 ಮೊಬೈಲ್ ಹ್ಯಾಂಡ್ಸೆಟ್ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಂಡು ಬಂದಿದ್ದು, ಈ ಮೊಬೈಲ್ ಹ್ಯಾಂಡ್ಸೆಟ್ಗಳೊಂದಿಗೆ 20 ಲಕ್ಷ ಸಂಖ್ಯೆಗಳನ್ನು ಬಳಸಲಾಗಿದೆ ಎಂದು ಕಂಡುಹಿಡಿದಿದೆ. ಹೀಗಾಗಿ, 28,200 ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಪ್ಯಾನ್ ಇಂಡಿಯಾ ನಿರ್ಬಂಧಿಸಲು ಮತ್ತು ಈ ಮೊಬೈಲ್ ಹ್ಯಾಂಡ್ಸೆಟ್ಗಳಿಗೆ ಲಿಂಕ್ ಮಾಡಲಾದ 20 ಲಕ್ಷ ಮೊಬೈಲ್ ಸಂಪರ್ಕಗಳ ತಕ್ಷಣದ ಮರುಪರಿಶೀಲನೆಯನ್ನು ಕೈಗೊಳ್ಳಲು ಮತ್ತು ಇವುಗಳನ್ನು ಕಡಿತಗೊಳಿಸಲು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಡಾಟ್ ನಿರ್ದೇಶನಗಳನ್ನು ನೀಡಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ, ವಂಚನೆಗಾಗಿ ಸಿಮ್ ಕಾರ್ಡ್ಗಳನ್ನು ಬಳಸುವ ಕಿಡಿಗೇಡಿಗಳ ಜೊತೆ ಸಂಪರ್ಕ ಇರುವ ಸಿಮ್ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಟೆಲಿಕಮ್ಯೂನಿಕೇಶನ್ ಇಲಾಖೆ ಮುಂದಾಗಿತ್ತು. ಆ ನಿಟ್ಟಿನಲ್ಲಿ ಸಿಮ್ ಕಾರ್ಡ್ಗಳನ್ನು ಮಾರಾಟ ಮಾಡುವ ಡೀಲರ್ಗಳು ಟೆಲಿಕಾಂ ಆಪರೇಟರ್ಗಳೊಂದಿಗೆ ನೋಂದಾಯಿಸಿಕೊಳ್ಳಬೇಕೆಂದು ಇಲಾಖೆ ಕಡ್ಡಾಯಗೊಳಿಸಿತ್ತು. ಯಾವುದೇ ಕಾನೂನುಬಾಹಿರ ಚಟುವಟಿಕೆಯ ಸಂದರ್ಭದಲ್ಲಿ, ಡೀಲರ್ಶಿಪ್ ಅನ್ನು ಕೊನೆಗೊಳಿಸಲಾಗುತ್ತದೆ ಮತ್ತು ಮೂರು ವರ್ಷಗಳವರೆಗೆ ಬ್ಲ್ಯಾಕ್ ಲಿಸ್ಟ್ ಸೇರಿಸಲಾಗುತ್ತದೆ ಎಂದು ಸಚಿವಾಲಯ ಈ ಹಿಂದೆ ಹೇಳಿತ್ತು.