ಮುಂಬೈ, ಮೇ.10(DaijiworldNews/AK): ಖ್ಯಾತ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಹತ್ಯೆಗೈದಿದ್ದ ಇಬ್ಬರಿಗೆ ಪುಣೆಯ ವಿಶೇಷ ಯುಎಪಿಎ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಇತರ ಮೂವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಇಬ್ಬರು ಶೂಟರ್ಗಳಾದ ಶರದ್ ಕಲಾಸ್ಕರ್ ಮತ್ತು ಸಚಿನ್ ಅಂದುರೆ ತಪ್ಪಿತಸ್ಥರು ಎಂದು ನ್ಯಾಯಾಲಯ ಆದೇಶಿಸಿದೆ. ಹತ್ಯೆ ಪ್ರಕರಣದಲ್ಲಿ ಇತರ ಮೂವರು ಆರೋಪಿಗಳಾದ ವೀರೇಂದ್ರಸಿನ್ಹ ತಾವಡೆ, ಸಂಜೀವ್ ಪುನಾಲೇಕರ್ ಮತ್ತು ವಿಕ್ರಮ್ ಭಾವೆ ಎಂಬವರ ವಿರುದ್ಧ ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಮೂವರನ್ನು ಆರೋಪ ಮುಕ್ತಗೊಳಿಸಲಾಗಿದೆ.
ಆ.20 2013 ರಂದು ನರೇಂದ್ರ ದಾಭೋಲ್ಕರ್ ಅವರು ಪುಣೆಯ ಓಂಕಾರೇಶ್ವರ ಸೇತುವೆಯ ಮೇಲೆ ಬೆಳಗ್ಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಐವರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ತನಿಖೆ ನಡೆಸಿದ್ದ ಅಧಿಕಾರಿಗಳು, ದಾಭೋಲ್ಕರ್ ಅವರು ಮೂಢನಂಬಿಕೆ ವಿರುದ್ಧ ಅಭಿಯಾನ ನಡೆಸುತ್ತಿದ್ದ ಕಾರಣ ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದರು. ಬಳಿಕ 2014ರಲ್ಲಿ, ಬಾಂಬೆ ಹೈಕೋರ್ಟ್ ನಿರ್ದೇಶನದ ನಂತರ ಸಿಬಿಐ ತನಿಖೆಯನ್ನು ವಹಿಸಿಕೊಂಡಿತ್ತು.