ಕುಮುಟಾ, ಮೇ.3(DaijiworldNews/AK):ನರೇಂದ್ರ ಮೋದಿ ಒಬ್ಬ ಒಳ್ಳೆಯ ನಾಟಕಕಾರ. ಇವೆಂಟ್ ಮ್ಯಾನೇಜರ್ ಆಗಿದ್ದಾರೆ. ಉತ್ತರಕನ್ನಡ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಹೊಸ ಬದಲಾವಣೆಗೆ ಉತ್ತಮ ಅವಕಾಶ ಒದಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಇಂದು ಕುಮುಟಾದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
ಪ್ರಧಾನಿ ಕುರ್ಚಿಯಲ್ಲಿ ಉಳಿಯಲು ಯೋಗ್ಯತೆ ಇಲ್ಲ. ಬಿಜೆಪಿ ಮಹಿಳೆಯರಿಗೆ ರಕ್ಷಣೆ ಕೊಡುತ್ತದೆ ಎಂದು ಹೇಳುವ ಮೋದಿಯವರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಏನು ಮಾಡಿದ್ದಾರೆ ಎಂದು ಜಗಜ್ಜಾಹೀರಾಗಿದೆ. ಇದು ತಿಳಿದಿದ್ದರೂ ಕೂಡ ಹೊಂದಾಣಿಕೆ ಮಾಡಿಕೊಂಡು ಅತ್ಯಾಚಾರ ಮಾಡಿರುವ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ಕೊಟ್ಟಿದ್ದೀರಲ್ಲಾ? ಇದೇನಾ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡುವ ರೀತಿ ? ಅತ್ಯಾಚಾರಿಗಳಿಗೆ ರಕ್ಷಣೆ ಕೊಟ್ಟು, ಹೆಣ್ಣು ಮಕ್ಕಳಿಗೆ ಏನು ಸಂದೇಶ ನೀಡಿದ್ದೀರಿ ಎಂದು ಇಡೀ ರಾಜ್ಯದ ಜನ ಕೇಳುತ್ತಿದ್ದಾರೆ ಎಂದರು.
ಮೋದಿ ಬರೀ ಸುಳ್ಳು ಹೇಳುತ್ತಾರೆ. ಯಾವ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡಿಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲದ ಮೇಲೆ ಅವರು ಪ್ರಧಾನಿ ಕುರ್ಚಿಯಲ್ಲಿ ಉಳಿಯಲು ಯೋಗ್ಯತೆ ಇಲ್ಲ ಎನ್ನಬೇಕಾಗುತ್ತದೆ ಎಂದರು.ಬಾರಿ ಬದಲಾವಣೆ ತೆರೆಯಲು ನಿಮಗೆ ಅವಕಾಶ ದೊರೆತಿದೆ .
ಹತ್ತು ವರ್ಷಗಳ ಕಾಲ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಬಡವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಿಲ್ಲ. ಅವರ ಕಷ್ಟ ಸುಖ ಏನೆಂದು ಕೇಳಲಿಲ್ಲ. ಕರ್ನಾಟಕದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಡಬಲ್ ಇಂಜಿನ್ ಸರ್ಕಾರವಾಗುತ್ತದೆ ಎಂದಿದ್ದರು. ಬಿಜೆಪಿ ಸರ್ಕಾರ 3 ವರ್ಷ ಹತ್ತು ತಿಂಗಳು ಲೂಟಿ ಮಾಡಿದ್ದು ಬಿಟ್ಟರೆ ಬಡವರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಏನೂ ಕೆಲಸ ಮಾಡಲಿಲ್ಲ ಎಂದರು.
ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಜನತೆ ಆಶೀರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಹಿಂದೆಲ್ಲಾ ಈ ಕ್ಷೇತ್ರದಿಂದ ಬಿಜೆಪಿಯನ್ನು ಗೆಲ್ಲಿಸಿದ್ದೀರಿ. ಒಮ್ಮೆ ಮಾರ್ಗರೇಟ್ ಆಳ್ವ ಅವರು ಸಂಸದರಾಗಿದ್ದರು. ಈ ಬಾರಿ ಬದಲಾವಣೆ ತೆರೆಯಲು ನಿಮಗೆ ಒಳ್ಳೆಯ ಅವಕಾಶ ದೊರೆತಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಬದಲಾವಣೆಗೆ ಕಾರಣರಾಗಿ ಎಂದರು.