ರಾಯಚೂರು, ಮೇ.3(DaijiworldNews/AK): ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಟೆನ್ಶಿಂನ್ನಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಯೊಂದಿಗಿನ ಮೈತ್ರಿ ಉಳಿಸಿಕೊಳ್ಳುವ ಉತ್ಸಾಹ ಕಳೆದುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಿಕ ಬಿಜೆಪಿ ಮೈತ್ರಿ ಏನಾಗಬಹುದು ಎಂದು ಕೇಳಲಾದ ಪ್ರಶ್ನೆಗೆ ಕುಮಾರಸ್ವಾಮಿ, ತನಗೆ ಮೈತ್ರಿ ಮುಖ್ಯ ಅಲ್ಲ ಎಂದು ಹೇಳಿದ್ದಾರೆ.
ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇದೆಲ್ಲಾ ಕಾಲ ನಿರ್ಧಾರ ಮಾಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.ತಾವು ಪಲಾಯನ ಮಾಡಲ್ಲ. ಪ್ರಜ್ವಲ್ ಪ್ರಕರಣ ಬೆಳಕಿಗೆ ಬಂದಾಗ ಇದು ಮಾರ್ಫಿಂಗ್ ವಿಡಿಯೋ ಎಂದು ಹೇಳಿದೆವಾ? ಯಾರೆ ತಪ್ಪು ಮಾಡಿದ್ದರೂ ಶಿಕ್ಷೆ ಆಗಲಿ ಎಂದು ಧೈರ್ಯವಾಗಿ ಹೇಳಿದ್ದೇವೆ. ತನಿಖೆ ಆಗಲಿ, ತಪ್ಪಿತಸ್ಥರು ಯಾರೆಂದು ಗೊತ್ತಾಗಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಈ ಪ್ರಕರಣವನ್ನು ಇಟ್ಟುಕೊಂಡು ಪಾಪ ಆ ದೇವೇಗೌಡರ ವರ್ಚಸ್ಸನ್ನು ಕುಂದಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಸಾಧ್ಯವಾಗಲ್ಲ. ದೇವರು ನನ್ನ ಹಣೆಯಲ್ಲಿ ಏನು ಬರೆದಿದ್ದಾನೋ ಅದನ್ನು ಕಿತ್ತುಕೊಳ್ಳಲು ನಿಮ್ಮಿಂದ ಆಗಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. .