ಯಾದಗಿರಿ, ಮೇ.1(DaijiworldNews/AK): ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು ಯಾದಗಿರಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಜಿ ಕುಮಾರ ನಾಯ್ಕ ಅವರ ಪರವಾಗಿ ಮತದಾರರಲ್ಲಿ ಮತ ಯಾಚಿಸಿ ಮಾತನಾಡಿದರು.
ನರೇಂದ್ರ ಮೋದಿಯವರ ಬಳಿ ಹಣ ಜಾಸ್ತಿ ಇದ್ದರೆ, ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ತುಂಬಲು ಏನು ಅಡ್ಡಿಯಾಗಿತ್ತು? ಅದನ್ನು ತುಂಬಿದ್ದರೆ ಸುಮಾರು 50% ಹಿಂದುಳಿದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಕೆಲಸ ದೊರಕುತ್ತಿತ್ತು. ಇನ್ನುಳಿದ 50% ಇತರರಿಗೆ ದೊರಕುತ್ತಿತ್ತು. ಈ ಖಾಲಿ ಹುದ್ದೆಗಳನ್ನು ಏಕೆ ತುಂಬಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಬಳಿ ಸಂಬಳ ಕೊಡಲು ದುಡ್ಡಿಲ್ಲ ಎನ್ನುವ ಮೋದಿ ಮತ್ತು ಬಿಜೆಪಿ ಆರೋಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ದುಡ್ಡಿಲ್ಲದೇ ಹೋಗಿದ್ದರೆ 8 ತಿಂಗಳಲ್ಲಿ 5 ಗ್ಯಾರಂಟಿ ಗಳನ್ನು ಜಾರಿ ಮಾಡಲು ಸಾಧ್ಯವಾಗುತ್ತಿತ್ತೇ? ವೇತನ ದೊರಕಿಲ್ಲ ಎಂದು ಸರ್ಕಾರಿ ನೌಕರರು ಹೇಳಿದ್ದಾರೆಯೇ ? ಎಂದು ಪ್ರಶ್ನಿಸಿದರು.
ಈ ಮೋದಿ ದೇಶದ ಪ್ರಧಾನಿಯಾಗಿ ಮಹಾನ್ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಇವರ ಸುಳ್ಳುಗಳನ್ನು ದೇಶದ ಜನ ಇನ್ನೂ ಎಷ್ಟು ವರ್ಷ ನಂಬಬೇಕು ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರಿಗೆ ದೇಶದಲ್ಲಿ ನಡೆದಿರುವ 2 ಹಂತದ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ. ಎ ಗೆ ಕಡಿಮೆ ಸ್ಥಾನಗಳು ಬರಲಿದೆ ಎನ್ನುವುದು ನರೇಂದ್ರ ಮೋದಿಯವರಿಗೆ ಸ್ಪಷ್ಟವಾಗಿ ಗೊತ್ತಾಗಿ ಹತಾಶರಾಗಿದ್ದಾರೆ. ಅದಕ್ಕೇ ಕರ್ನಾಟಕಕ್ಕೆ ಬಂದು ಬಾಯಿಗೆ ಬಂದಂತೆ ಮಾತನಾಡುತ್ತಾ, ಕೇವಲ ಸುಳ್ಳುಗಳನ್ನು ಹೇಳಿಕೊಂಡು ತಿರುಗುತ್ತಿದ್ದಾರೆ. ಕರ್ನಾಟಕದ ಖಜಾನೆ ಖಾಲಿಯಾಗಿದ್ದು ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂಬ ಹಸಿ ಹಸಿ ಸುಳ್ಳು ಹೇಳಿದ್ದಾರೆ ಎಂದರು.