ನವದೆಹಲಿ, ಏ. 30(DaijiworldNews/AK): ಹೊಸ ಅಬಕಾರಿ ನೀತಿಯಲ್ಲಿ ತಮ್ಮ ಬಂಧನದ ಅವಧಿಯನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆ ವೇಳೆಗೆ ಐದು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಗುವಂತೆ ಇಡಿ ಪರ ವಕೀಲರಿಗೆ ಸೂಚನೆ ನೀಡಿದೆ. ಇದೇ ವೇಳೆ ಮುಖ್ಯವಾಗಿ ಚುನಾವಣೆ ಮುಂಚಿತವಾಗಿ ಅವರನ್ನು ಬಂಧಿಸಿದ್ದೇಕೆ ಎಂದು ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಪ್ರಶ್ನಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ಪ್ರಕರಣದಲ್ಲಿ ಕೇಜ್ರಿವಾಲ್ ಹೇಗೆ ಸಂಬಂಧ ಹೊಂದಿದ್ದಾರೆ? ಮನೀಶ್ ಸಿಸೋಡಿಯಾ ಪ್ರಕರಣದಲ್ಲಿ ಎರಡು ಭಾಗಗಳಿವೆ. ಆ ಪೈಕಿ ಒಂದು ಅವರ ಪರವಾಗಿ ಮತ್ತೊಂದು ಅವರ ವಿರುದ್ಧವಾಗಿದೆ. ಇದರ ಯಾವ ಭಾಗದಲ್ಲಿ ಕೇಜ್ರಿವಾಲ್ ಇದ್ದಾರೆ ಇದಕ್ಕೆ ಉತ್ತರಿಸಬೇಕು ಎಂದು ಪೀಠ ಸೂಚಿಸಿದೆ.
ಜಾಮೀನಿಗೆ ಅರ್ಜಿ ಸಲ್ಲಿಸುವ ಬದಲು ಕೇಜ್ರಿವಾಲ್ ಬಂಧನ ಮತ್ತು ರಿಮಾಂಡ್ ವಿರುದ್ಧ ಬರುತ್ತಿರುವ ಕಾರಣ ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 19 ಅನ್ನು ಹೇಗೆ ಅರ್ಥೈಸಬೇಕು? ವಿಶೇಷವಾಗಿ ಸೆಕ್ಷನ್ 8ರ ತೀರ್ಪು ಪ್ರಕ್ರಿಯೆಗೆ 365 ದಿನಗಳ ಗರಿಷ್ಠ ಸಮಯದ ಮಿತಿಯನ್ನು ಸೂಚಿಸುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ಮುಂಚಿತವಾಗಿ ಅವರನ್ನು ಬಂಧಿಸಿದ್ದೇಕೆ ಎಂದು ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಪ್ರಶ್ನಿಸಿದೆ.
ಇಡಿ ಪ್ರಶ್ನೆಗಳಿಗೂ ಮುನ್ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಕೇಜ್ರಿವಾಲ್ ಪರ ಎರಡು ಗಂಟೆಗೂ ಅಧಿಕ ಕಾಲ ಸುಧೀರ್ಘವಾಗಿ ವಾದ ಮಂಡಿಸಿದರು. ವಾದ ಆಲಿಸಿದ ಬಳಿಕ ನ್ಯಾಯಾಲಯ ಶುಕ್ರವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.