ಬೆಂಗಳೂರು, ಏ. 30(DaijiworldNews/Ak):ಕೇಂದ್ರ ಸರಕಾರ ಬಿಡುಗಡೆ ಮಾಡಿದ ಬರ ಪರಿಹಾರದ ಮೊತ್ತವನ್ನು ಕಾಂಗ್ರೆಸ್ ಸರಕಾರವು ಲೂಟಿ ಹೊಡೆದು, ಎಟಿಎಂ ಆಗಿ ಇದನ್ನು ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ಬೇರೆ ಬೇರೆ ರಾಜ್ಯಗಳಿಗೆ ಕಳಿಸುವ ನೀಚ ಕೆಲಸವನ್ನು ಮಾಡಬಾರದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಗ್ರಹಿಸಿದರು.
ಹುಬ್ಬಳ್ಳಿ ಅರವಿಂದ ನಗರದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ನೇರವಾಗಿ ಡಿಬಿಟಿ ಮೂಲಕ ಹಣ ಕೊಡಿ ಎಂದು ಅವರು ಆಗ್ರಹಿಸಿದರು. ಖಜಾನೆ ಖಾಲಿ ಆಗಿರುವ ಕಾರಣ ವಿಳಂಬ ಮಾಡಲು ಮತ್ತು ಕೇಂದ್ರ ಬಿಡುಗಡೆ ಮಾಡಿದ ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಸಂಚು ರಾಜ್ಯ ಸರಕಾರದ್ದು ಎಂದು ಆಕ್ಷೇಪಿಸಿದರು.
ಮೋದಿಯವರು ಕೊಟ್ಟ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಿ ಎಂದು ಒತ್ತಾಯಿಸಿದರು.ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ. ಒಂದೇಬಾರಿ 3,454 ಕೋಟಿ ಹಣವನ್ನು ಬಿಡುಗಡೆ ಮಾಡಿದ ಏಕೈಕ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರಿಗೆ ಕರ್ನಾಟಕದ ರೈತರ ಪರವಾಗಿ ಅಭಿನಂದನೆಗಳು ಎಂದು ತಿಳಿಸಿದರು.
ಡಾ.ಮನಮೋಹನ್ ಸಿಂಗ್, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನರಸಿಂಹರಾವ್ ಪ್ರಧಾನಿ ಆಗಿದ್ದಾಗ ಒಂದೇ ಸಾರಿ ಇಷ್ಟೊಂದು ಹಣವನ್ನು ಬಿಡುಗಡೆ ಮಾಡಿರಲಿಲ್ಲ ಎಂದು ವಿವರಿಸಿದರು.
ವಿಪತ್ತು ನಿರ್ವಹಣೆಯಡಿ ರೈತರಿಗೆ ಪ್ರತಿ ಹೆಕ್ಟೇರ್ಗೆ ಕೊಡುವ ಮೊತ್ತವನ್ನು ನಾವು ಮ್ಯಾಚಿಂಗ್ ಗ್ರಾಂಟ್ ನೀಡಿ ದ್ವಿಗುಣಗೊಳಿಸಿದ್ದೆವು. ಕಾಂಗ್ರೆಸ್ಸಿನವರು ಕೂಡ ಕೇಂದ್ರ ನೀಡಿದ ಮೊತ್ತಕ್ಕೆ ಹೆಚ್ಚುವರಿಯಾಗಿ 3,454 ಕೋಟಿ ಮ್ಯಾಚಿಂಗ್ ಗ್ರಾಂಟ್ ಕೊಟ್ಟು ಡಬಲ್ ಹಣ ನೀಡಬೇಕೆಂದು ಅವರು ಆಗ್ರಹಿಸಿದರು.
ನೀವು ರೈತಪರರಾಗಿದ್ದರೆ ಹೆಚ್ಚುವರಿ ಮೊತ್ತ ಸೇರಿಸಿ ಕೊಡಿ; ಹೆಚ್ಚುವರಿ ಪರಿಹಾರ ಕೊಡದೆ ಇದ್ದಲ್ಲಿ ನೀವು ರೈತ ವಿರೋಧಿಗಳು ಎಂದು ತಿಳಿಸಿದರು.ನೀವು ಸರಕಾರದಲ್ಲಿದ್ದಾಗ ಕೊಟ್ಟಷ್ಟೇ ಪರಿಹಾರ ಮೊತ್ತವನ್ನು ಕೊಡಿಸಿ ಎಂದು ರೈತರು ವಿನಂತಿ ಮಾಡುತ್ತಿದ್ದಾರೆ. ಆದ್ದರಿಂದ ಸರಕಾರವು ಕೂಡಲೇ ಪೂರಕ ಮೊತ್ತ ಬಿಡುಗಡೆ ಮಾಡಿ ರೈತರಿಗೆ ವಿತರಿಸಿ ಎಂದು ಆಗ್ರಹಿಸಿದರು.