ದಾವಣಗೆರೆ, ಏ.28(DaijiworldNews/AK):ಕರ್ನಾಟಕದಲ್ಲಿ ಎರಡೂವರೆ ವರ್ಷದ ಆಡಳಿತ ಸಂಬಂಧ ಸಮರ ಮುಂದುವರೆದಿದೆ. ಇಂಡಿ ಒಕ್ಕೂಟದಲ್ಲಿ ನಾಯಕ ಯಾರೆಂಬ ಸ್ಪಷ್ಟತೆಯೇ ಇಲ್ಲ. ಎಲ್ಲರನ್ನೂ ಸಂತೋಷದಲ್ಲಿ ಇಡಲು ಒಂದು ವರ್ಷಕ್ಕೊಬ್ಬರನ್ನು ಪ್ರಧಾನಿ ಮಾಡುವ ಚಿಂತನೆ ಇಂಡಿ ಒಕ್ಕೂಟದ್ದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದರು.
ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಇಂಥವರಿಗಾಗಿ ಮತವನ್ನು ಹಾಳು ಮಾಡಬೇಕೇ ಎಂದು ಪ್ರಶ್ನಿಸಿದರು. ಮೌಲ್ಯಯುತ ಮತವನ್ನು ಹಾಳು ಮಾಡದಿರಿ ಎಂದು ವಿನಂತಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಎಸ್ಸಿ, ಎಸ್ಟಿಗಳಿಗಾಗಿ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ಬೇರೆಡೆ ವರ್ಗಾಯಿಸಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ಬಿಜೆಪಿ ಸರಕಾರ 4 ಸಾವಿರ ಕೊಡುತ್ತಿತ್ತು. ಆ 4 ಸಾವಿರ ಕೊಡುವುದನ್ನು ಕಾಂಗ್ರೆಸ್ ಸರಕಾರ ರದ್ದು ಮಾಡಿತು. ಈಗ ಕೇವಲ 6 ಸಾವಿರ ಮಾತ್ರ ಸಿಗುತ್ತಿದೆ. ಕಾಂಗ್ರೆಸ್ಸಿನವರಿಗೆ ರೈತರ ಮೇಲೆ ದ್ವೇಷ ಇದೆಯೇ? ಎಂದು ಕೇಳಿದರು. ಒಬಿಸಿ ಮೀಸಲಾತಿಯಡಿ ಅಲ್ಪಸಂಖ್ಯಾತರನ್ನು ತಂದಿದೆ ಎಂದು ಆಕ್ಷೇಪಿಸಿದರು.
ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಕಟ್ಟುವಂತೆ ಸೂಚಿಸುವ ಪ್ರಯತ್ನ ಕಾಂಗ್ರೆಸ್ಸಿನದು. ಮಕ್ಕಳ ಒಳಿತಿಗಾಗಿ ಕೂಡಿಟ್ಟ ಹಣದ ಮೇಲೆ ಶೇ 55 ತೆರಿಗೆ ಕಟ್ಟಲು ಸೂಚಿಸಿ ಡಕಾಯಿತಿ ನಡೆಸಿ, ಅದನ್ನು ಬೇರೆಯವರಿಗೆ ಹಂಚುವ ಪ್ರಯತ್ನ ಇವರದು ಎಂದು ವಿಶ್ಲೇಷಿಸಿದರು.
ಕಾನೂನು- ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆ ಬರಲು ಸಾಧ್ಯವೇ? ಕರ್ನಾಟಕದ ಕಾನೂನು- ಸುವ್ಯವಸ್ಥೆ ಗಂಭೀರ ಸ್ಥಿತಿಗೆ ತಲುಪಿದೆ. ರಾಜ್ಯದ ನಾಗರಿಕರು ಅಸುರಕ್ಷಿತತೆಯ ಚಿಂತೆಯಲ್ಲಿದ್ದಾರೆ. ಕೆಫೆಯಲ್ಲಿ ಬಾಂಬ್ ಸ್ಫೋಟವಾದರೆ ಗ್ಯಾಸ್ ಸಿಲಿಂಡರ್ ಸ್ಫೋಟ ಎನ್ನುತ್ತಾರೆ. ಬಳಿಕ ಬಿಸಿನೆಸ್ ಸಂಬಂಧ ವೈಷಮ್ಯ ಎನ್ನುತ್ತಾರೆ. ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆದಿದೆ. ಅದರಲ್ಲೂ ಕಾಂಗ್ರೆಸ್ ವೋಟ್ಬ್ಯಾಂಕ್ ಹುಡುಕಿತು ಎಂದು ಟೀಕಿಸಿದರು.
ನೇಹಾರ ಹತ್ಯೆ ಸಾಮಾನ್ಯ ಘಟನೆ ಅಲ್ಲ. ಸರಕಾರ ನಡೆಸುತ್ತಿರುವವರು ಮತಬ್ಯಾಂಕ್ ಚಿಂತೆಯಲ್ಲಿದ್ದಾರೆ. ಪ್ರತಿಬಂಧಿತ ಪಿಎಫ್ಐ, ಎಸ್ಡಿಪಿಐ ಜೊತೆ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕದ ಪ್ರತಿ ಕಡೆಯಿಂದ ಮೋದಿ ಮತ್ತೊಮ್ಮೆ ಎಂಬ ಸ್ವರ ಕೇಳಿಸುತ್ತಿದೆ. ಕರ್ನಾಟಕದಲ್ಲಿ ಜೂನ್ 4ರಂದು ವಿಜೃಂಭಣೆಯಿಂದ ವಿಜಯೋತ್ಸವ ನಡೆಯಲಿದೆ. ದಾವಣಗೆರೆಯಲ್ಲಿ ಬೆಣ್ಣೆದೋಸೆಯ ಸಂಭ್ರಮ ಇರಲಿದೆ ಎಂದರು. ಜನರಿಗಾಗಿ ಸದಾ ಕೆಲಸ ಮಾಡುವ ಗ್ಯಾರಂಟಿಯನ್ನು ನಿಮಗೆ ನೀಡಿದ್ದೇನೆ. ಅದನ್ನು ಈಡೇರಿಸಿದ್ದೇನೆ ಎಂದು ನುಡಿದರು.