ಶಿರಸಿ, ಏ.28(DaijiworldNews/AK): ಕಾಂಗ್ರೆಸ್ ಪಕ್ಷದವರು ರಾಮಲಲಾನಿಗೆ ಅಪಮಾನ ಮಾಡಿದರು. ಇವರಿಗೆ ಕರ್ನಾಟಕ, ದೇಶ ಪಾಠ ಕಲಿಸದೆ ಇದ್ದೀತೇ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಶ್ನಿಸಿದರು.
ಶಿರಸಿಯಲ್ಲಿ ಇಂದು ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ’ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಪ್ರಭು ಶ್ರೀರಾಮನ ಮಂದಿರವನ್ನು ಜನರೇ ತಮ್ಮ ಹಣದಿಂದ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅವರ ಮಿತ್ರಪಕ್ಷಗಳು ರಾಮಮಂದಿರ ನಿರ್ಮಾಣ ತಡೆಯಲು ನಿರಂತರ ಪ್ರಯತ್ನ ಮಾಡಿದರು. ಆದರೆ, ದೇವಾಲಯದ ಟ್ರಸ್ಟಿಗಳು ಅವರ ತಪ್ಪು ಮರೆತು ಪ್ರಾಣ ಪ್ರತಿಷ್ಠೆಗೆ ಆಹ್ವಾನ ನೀಡಿದರು. ಆದರೆ, ಪ್ರಭುರಾಮನ ಪ್ರಾಣ ಪ್ರತಿಷ್ಠೆ ಆಹ್ವಾನವನ್ನು ಇವರು ತಿರಸ್ಕರಿಸಿ ಅವಮಾನ ಮಾಡಿದರು ಎಂದು ವಿವರ ನೀಡಿದರು.
ಮುಸ್ಲಿಮರು ಈ ಆಹ್ವಾನವನ್ನು ಪುರಸ್ಕರಿಸಿದ್ದನ್ನು ನೆನಪಿಸಿದರು.ನಮ್ಮೆಲ್ಲರ ಪೂರ್ವಜರು ಅಯೋಧ್ಯೆಯಲ್ಲಿ ರಾಮಲಲಾ ಮೂರ್ತಿ ಪ್ರತಿಷ್ಠಾಪನೆಗಾಗಿ 500 ವರ್ಷ ಹೋರಾಡಿದರು. ಲಕ್ಷಗಟ್ಟಲೆ ಜನರು ಪ್ರಾಣತ್ಯಾಗ ಮಾಡಿದರು. ಸ್ವಾತಂತ್ರ್ಯೋತ್ಸವದ ಮರುದಿನವೇ ಇದು ಆಗಬೇಕಿತ್ತು. 500 ವರ್ಷಗಳ ಕನಸು, ನಿರೀಕ್ಷೆ ಈಡೇರಲು ನಿಮ್ಮ ಮತದ ತಾಕತ್ತು ಸಿಕ್ಕಿದರೆ ಮಾತ್ರ ಸಾಧ್ಯ ಎಂದರು. ಇವತ್ತು ಅಯೋಧ್ಯೆಯಲ್ಲಿ ಪ್ರಭುರಾಮನ ಮಂದಿರ ನಿರ್ಮಾಣವಾಗಿದೆ. ಇದೊಂದು ಪುಣ್ಯ, ಪವಿತ್ರ ಕಾರ್ಯ ಎಂದು ತಿಳಿಸಿದರು.
ಈ ಪುಣ್ಯದ ಹಕ್ಕುದಾರರು ಮತದಾರರು ಎಂದು ನುಡಿದರು. ದೇಶವು ಅಭಿವೃದ್ಧಿ- ನಮ್ಮ ಪ್ರಾಚೀನ ಪರಂಪರೆಯನ್ನು ಪುರಸ್ಕರಿಸಲು ಬಯಸುತ್ತದೆ. ಅದನ್ನು ಬಿಜೆಪಿ ಆಡಳಿತ ಮಾಡಿದೆ. ಕಿರುಧಾನ್ಯಕ್ಕೆ ನಾವು ಉತ್ತೇಜನ ನೀಡಿದ್ದೇವೆ ಎಂದು ವಿವರಿಸಿದರು.
ನಿಮ್ಮ ಆಶೀರ್ವಾದದಿಂದ 2 ಬಾರಿ ಬಿಜೆಪಿ- ಎನ್ಡಿಎಯ ಶಕ್ತಿಶಾಲಿ ಸರಕಾರ ದೇಶದ ಆಡಳಿತ ನಡೆಸಿದೆ. ನಾವು ಮೂಲಸೌಕರ್ಯ ವೃದ್ಧಿಗೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಧಾರವಾಡ ಐಐಟಿ, ಆಧುನಿಕ ರೈಲ್ವೆ ನಿಲ್ದಾಣ ನಿಮಗೆ ಸಿಕ್ಕಿದೆ. ಅಭಿವೃದ್ಧಿಯ ಆಶಯದೊಂದಿಗೆ ನಾವು ಕೆಲಸ ಮಾಡಿದ್ದೇವೆ. ಬಹುಮತದ ಸರಕಾರವಿದ್ದಾಗ ವಿಶ್ವವು ಆ ದೇಶಕ್ಕೆ ಗೌರವ ನೀಡುತ್ತದೆ. ಅಮೇರಿಕ ಸೇರಿ ಎಲ್ಲ ದೇಶಗಳು ಹಿಂದುಸ್ತಾನಕ್ಕೆ ಗೌರವ ಕೊಡುತ್ತಾರೆ ಎಂದು ವಿಶ್ಲೇಷಿಸಿದರು.