ಬೆಂಗಳೂರು, ಏ.28(DaijiworldNews/AA): ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿ ಎರಡು ವಾರಗಳು ಕಳೆದಿವೆ. ಇದೀಗ ಮತ್ತೆ ರಾಜ್ಯದಲ್ಲಿ ಏಪ್ರಿಲ್ 29ರಿಂದ ಅಂದರೆ ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ- 2 ಆರಂಭವಾಗಲಿದೆ.
ಪಿಯುಸಿ ಫಲಿತಾಂಶ ಹೆಚ್ಚಿಸಲು ಈ ವರ್ಷ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಬಾರಿ ಪರೀಕ್ಷೆ ಬರೆಯಲು ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಅವಕಾಶ ಕಲ್ಪಿಸಿದೆ. ಈಗಾಗಲೇ ಕಳೆದ ತಿಂಗಳು ಪಿಯುಸಿ ಪರೀಕ್ಷೆ ನಡೆದಿದ್ದು, ಫಲಿತಾಂಶವೂ ಪ್ರಕಟವಾಗಿತ್ತು. ಇದೀಗ ಪಿಯುಸಿ ಪರೀಕ್ಷೆ – 2 ಆರಂಭವಾಗಲಿದ್ದು, ನಾಳೆಯಿಂದ ಮೇ 16 ರವರೆಗೆ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಗೆ ದಾಖಲೆಯ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ ಪಿಯುಸಿ -2 ಪರೀಕ್ಷೆಗೆ ಒಟ್ಟು149300 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಇದರಲ್ಲಿ ಮೊದಲ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಿಯು ವಿದ್ಯಾರ್ಥಿಗಳು ಕೂಡ ಮತ್ತೊಮ್ಮೆ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂಲಕ ಹಳೆಯ ಫಲಿತಾಂಶ ಚಾಲೆಂಜ್ ಮಾಡಲು 32 ಸಾವಿರ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯುತ್ತಿದ್ದಾರೆ.