ಗದಗ, (ಗಜೇಂದ್ರಗಡ),ಏ 25 (DaijiworldNews/ AK): ಕನ್ನಡ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸದ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆ ಬಂದಾಗ ಮಾತ್ರ ಕನ್ನಡಿಗರ ನೆನಪಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದಸ್ವಾಮಿ ಗಡ್ಡದೇವರಮಠ ರ ಪರವಾಗಿ ಆಯೋಜಿಸಲಾಗಿದ್ದ ಪ್ರಜಾಧ್ವನಿ-02 ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಶೂನ್ಯ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರವನ್ನು ತಮ್ಮ ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷಗಳ ಕಾಲ ಇದ್ದರೂ, ಈ ಭಾಗಕ್ಕೆ ಅವರ ಕೊಡುಗೆ ಶೂನ್ಯ. ಈ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದ ಬಸವರಾಜ ಬೊಮ್ಮಾಯಿಯವರನ್ನು ಸೋಲಿಸುವುದು ಎಲ್ಲರ ಕರ್ತವ್ಯ. ರೋಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಗೆ 25 ಸಾವಿರಕ್ಕಿಂತಲೂ ಹೆಚ್ಚು ಮತವನ್ನು ಕೊಡುತ್ತೀರೆಂಬ ವಿಶ್ವಾಸವಿದೆ ಎಂದರು.
ಮೋದಿ ಹೇಳಿದ ಅಚ್ಛೇ ದಿನ್ ಬರಲೇ ಇಲ್ಲ:
ಮೋದಿಯವರು 10 ವರ್ಷಗಳ ಪ್ರಧಾನಿಯಾಗಿದ್ದರೂ, ಅವರು ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಮತ್ತೊಮ್ಮೆ ಜನರ ಬಳಿ ಮತ ಕೇಳುವ ನೈತಿಕತೆ ಅವರಿಗೆ ಇಲ್ಲ ಎಂದು ಜನರು ಹೇಳಬೇಕು. 2014 ರಲ್ಲಿ ವಿದೇಶಿ ಕಪ್ಪು ಹಣವನ್ನು ಎಲ್ಲರ ಖಾತೆಗೆ 15 ಲಕ್ಷ ನೀಡುವ ಭರವಸೆ, ಪ್ರತಿ ವರ್ಷ 2 ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣಗೊಳಿಸುವ ಸುಳ್ಳನ್ನು ಹೇಳಿದ್ದಾರೆ. ಪೆಟ್ರೋಲ್, ಗ್ಯಾಸ್, ಆಹಾರವಸ್ತುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಇನ್ನೂ ಹೆಚ್ಚಾಗಿದೆ. ಅವರು ಹೇಳಿದ ಅಚ್ಛೇ ದಿನ್ ಬರಲೇ ಇಲ್ಲ. 2014ರಲ್ಲಿ ಒಂದು ಡಾಲರ್ ಬೆಲೆ 58 ರೂ. ಇತ್ತು, ಇಂದು 83 ರೂ. ಆಗಿದೆ. ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದ್ದು, ರೂಪಾಯಿ ಮೌಲ್ಯ ಹೆಚ್ಚಿಸುವ ಅವರ ಭರವಸೆ ಮೋದಿಯ ಮತ್ತೊಂದು ಸುಳ್ಳಾಗಿದೆ. ಮೇಲಿನ ಐದೂ ಭರವಸೆಗಳನ್ನು ಸುಳ್ಳಾಗಿಸಿರುವ ನರೇಂದ್ರ ಮೋದಿಯವರಿಗೆ ಜನರು ಮತ ನೀಡಬೇಕೇ ? ಸುಳ್ಳು ಹೇಳಿದ ನರೇಂದ್ರ ಮೋದಿಗೆ ಈ ಬಾರಿ ಮತ ನೀಡಬಾರದು ಎಂದು ಜನರಿಗೆ ಕರೆ ನೀಡಿದರು.
ರಾಜ್ಯಕ್ಕೆ ಬರಪರಿಹಾರ ಬಂದಿಲ್ಲ:
ಕಳೆದ ಬಾರಿ ರಾಜ್ಯದಿಂದ ಬಿಜೆಪಿಯ 25 ಸಂಸದರು ಇದ್ದರೂ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದಲ್ಲಿ ಎಂದೂ ಧ್ವನಿ ಎತ್ತಲಿಲ್ಲ. ಕಾಂಗ್ರೆಸ್ ನ ಸಂಸದ ಡಿ.ಕೆ.ಸುರೇಶ್ ಒಬ್ಬರೇ ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದವರು. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಕೇಂದ್ರ ಅನ್ಯಾಯ ಮಾಡಿದೆ. ರಾಜ್ಯದ 223 ತಾಲ್ಲೂಕುಗಳಲ್ಲಿ ಬರಗಾಲವಿದ್ದರೂ ಕೇಂದ್ರ ಬರ ಪರಿಹಾರ ನೀಡಲಿಲ್ಲ ಎಂದರು.ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ಕೆಂಗಣ್ಣು ಬೀರಿದೆ.
ನಮ್ಮ ಸಂಪನ್ಮೂಲದಿಂದ ಕುಡಿಯುವ ನೀರು, ಮೇವು ನೀಡುತ್ತಿದ್ದು, 24 ಲಕ್ಷ ರೈತರಿಗೆ ತಲಾ 2000 ರೂ. ನಂತೆ 650 ಕೋಟಿ ರೂ.ಗಳನ್ನು ನೀಡಲಾಗಿದೆ.ಕರ್ನಾಟಕದ ಬಗ್ಗೆ ಕೆಂಗಣ್ಣನ್ನು ಕೇಂದ್ರ ಸರ್ಕಾರ ಬೀರಿದೆ. ರಾಜ್ಯವನ್ನು ಕಡೆಗಣಿಸಿರುವ ಬಿಜೆಪಿಗೆ ಯಾವತ್ತೂ ಮತ ಹಾಕಬಾರದು ಎಂದು ನುಡಿದರು.