ಕೋಲ್ಕತ್ತಾ, ಏ 25 (DaijiworldNews/ AK): ಶಿಕ್ಷಕರಿಂದ ಮಾತ್ರವಲ್ಲ ಯಾವುದೇ ಸರ್ಕಾರಿ ನೌಕರರಿಂದ ಬಿಜೆಪಿಗೆ ಒಂದೇ ಒಂದು ವೋಟು ಪಶ್ಚಿಮ ಬಂಗಾಳದಲ್ಲಿ ಬೀಳಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನೇಮಕಾತಿಗೆ ನಡೆದಿದ್ದ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ-2016 (SLST) ಅನ್ನು ಅನೂರ್ಜಿತಗೊಳಿಸಿ ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಅಲ್ಲದೇ ಈ ಮೂಲಕ ಆಯ್ಕೆ ಮಾಡಲಾದ 25,753 ಶಿಕ್ಷಕರ ಹುದ್ದೆಯನ್ನು ವಜಾಗೊಳಿಸುವಂತೆ ಆದೇಶಿಸಿತು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, 26,000 ಶಿಕ್ಷಕರನ್ನ ವಜಾಗೊಳಿಸಿದ್ದು, ಚುನಾವಣಾ ತಂತ್ರಗಾರಿಕೆಯ ಭಾಗ. ಪಶ್ಮಿಮ ಬಂಗಾಳದಲ್ಲಿ ಈ ಬಾರಿ ಶಿಕ್ಷಕರು ಮಾತ್ರವಲ್ಲ ಯಾವುದೇ ಸರ್ಕಾರಿ ನೌಕರರಿಂದಲೂ ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪಕ್ಷಗಳಿಗೆ ಒಂದೇ ಒಂದು ವೋಟು ಬೀಳಲ್ಲ. ಬಿಜೆಪಿ ನ್ಯಾಯಾಲಯವನ್ನು ಖರೀದಿಸಿದೆ. ಆದ್ರೆ ನನಗೆ ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ವಿದೆ ಎಂದು ಹೇಳಿದ್ದಾರೆ.