ನವದೆಹಲಿ, ಏ 25 (DaijiworldNews/ AK): ಮತಯಂತ್ರದಲ್ಲಿ ನಮೂದಾದ ಶೇ.100 ರಷ್ಟು ಮತಗಳೊಂದಿಗೆ ವಿವಿ ಪ್ಯಾಟ್ (VVPAT) ಸ್ಲಿಪ್ಗಳನ್ನು ಹೋಲಿಸಿ ಲೆಕ್ಕ ಹಾಕಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಕೇಂದ್ರ ಚುನಾವಣಾ ಆಯೋಗ ಎನ್ನುವುದು ಸಂವಿಧಾನ ಬದ್ಧವಾದ ಸಂಸ್ಥೆಯಾಗಿದೆ. ನೀವು ಹೀಗೆ ಮಾಡಿ ಎಂದು ಕೋರ್ಟ್ ನಿರ್ದೇಶಿಸಲು ಬರುವುದಿಲ್ಲ. ಅಲ್ಲದೇ ಚುನಾವಣೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಅಧಿಕಾರವೂ ನಮಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಇವಿಎಂನಲ್ಲಿ ಮೈಕ್ರೋ ಕಂಟ್ರೋಲರ್ ಎಲ್ಲಿರುತ್ತೆ? ಕಂಟ್ರೋಲಿಂಗ್ ಯೂನಿಟ್ನಲ್ಲಾ? ವಿವಿ ಪ್ಯಾಟ್ನಲ್ಲಾ ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಚುನಾವಣಾಧಿಕಾರಿಗಳು ಕೋರ್ಟ್ ಮುಂದೆ ಹಾಜರಾಗಿ ವಿವರಣೆ ನೀಡಿದರು. ಇದನ್ನು ಪರಿಶೀಲಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತು.
ಈ ಸಂದರ್ಭದಲ್ಲಿ, ನಮ್ಮ ಅನುಮಾನಗಳನ್ನು ಆಯೋಗ ನಿವಾರಿಸಿದೆ. ಆದರೆ ನಿಮ್ಮ ಆಲೋಚನಾ ಧೋರಣೆಯನ್ನು ನಾವು ಬದಲಿಸಲಾಗಲ್ಲ. ಕೇವಲ ಅನುಮಾನಗಳ ಆಧಾರದ ಮೇಲೆ ಯಾವುದೇ ತೀರ್ಪು ನೀಡಲ್ಲ ಎಂದು ಅರ್ಜಿದಾರರನ್ನು ಉದ್ದೇಶಿಸಿ ಸುಪ್ರೀಂ ಕೋರ್ಟ್ ಹೇಳಿದೆ.