ಉತ್ತರ ಪ್ರದೇಶ, ಏ.23(DaijiworldNews/AK): ಇಂಗ್ಲಿಷ್ ಮಾಧ್ಯಮದಲ್ಲಿ ಓದದಿದ್ದರೂ ಅಖಿಲ ಭಾರತ 8ನೇ ರ್ಯಾಂಕ್ ಪಡೆಯುವ ಮೂಲಕ ಟಾಪರ್ ಎನಿಸಿಕೊಂಡ ಐಎಎಸ್ ವಂದನಾ ಸಿಂಗ್ ಚೌಹಾಣ್ ಬಗ್ಗೆ ತಿಳಿಯೋಣ.
ವಂದನಾ ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯ ನಸ್ರುಲ್ಲಗಢ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ವಂದನಾ ಹುಟ್ಟಿನಿಂದಲೂ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರು. ಹೆಣ್ಣು ಮಗಳಾದ ಕಾರಣ ವಂದನಾ ಅವರ ಓದಿನ ಬಗ್ಗೆ ಕುಟುಂಬದಲ್ಲಿ ತಕರಾರು ಇತ್ತು. ಆದರೆ ವಂದನಾ ಅವರ ತಂದೆ ಮಾತ್ರ ಮಗಳ ಓದಿಗೆ ಬೆಂಬಲ ನೀಡಿದರು. ಅಲ್ಲದೇ ಮಗಳನ್ನು ಮೊರಾದಾಬಾದ್ ನ ಗುರುಕುಲದಲ್ಲಿ ಓದಲು ಕಳುಹಿಸಿದರು.
ವಂದನಾ ಗುರುಕುಲದಿಂದ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಆಗ್ರಾದ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ LLB ಅಧ್ಯಯನವನ್ನು ಮನೆಯಿಂದಲೇ ಮಾಡಿದರು, ಕಾಲೇಜಿಗೆ ಹೋಗಲಿಲ್ಲ. ದೂರಶಿಕ್ಷಣದ ಮೂಲಕವೇ ಪದವಿ ಮುಗಿಸಿದರು.ವಂದನಾ ಅವರು ಭಿವಾನಿಯ ಕನ್ಯಾ ಗುರುಕುಲದಿಂದ ಸಂಸ್ಕೃತದಲ್ಲಿ (ಆನರ್ಸ್) ಪದವಿ ಪಡೆದರು. ಕಾನೂನು ಪದವಿ ಮುಗಿದ ನಂತರವೇ UPSC ಪರೀಕ್ಷೆಗೆ ತಯಾರಿ ಆರಂಭಿಸಿದರು.
ಮನೆಯಿಂದಲೇ UPSC CSE ಪರೀಕ್ಷೆಗೂ ತಯಾರಿ ನಡೆಸಿದ್ದರು. ಪ್ರತಿದಿನ 10 ರಿಂದ 12 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಕುಟುಂಬವನ್ನು ಎದುರು ಹಾಕಿಕೊಂಡು ತಂದೆ ಮತ್ತು ಸಹೋದರ ಅವರಿಗೆ ಬೆಂಬಲ ನೀಡಿದರು.
ಹಿಂದಿ ಮಾಧ್ಯಮದ ವಿದ್ಯಾರ್ಥಿನಿ ವಂದನಾ ಸಿಂಗ್ ಚೌಹಾಣ್ ಸ್ವ-ಅಧ್ಯಯನದ ಮೂಲಕ ನಾಗರಿಕ ಸೇವೆಗೆ ತಯಾರಿ ನಡೆಸಿ 24ನೇ ವಯಸ್ಸಿನಲ್ಲಿ 8ನೇ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾದರು.
ಯಾವುದೇ ಕೋಚಿಂಗ್ ಗೆ ಹೋಗದೆ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಕೂಡ ಆಕೆಯ ಸಾಧನೆಯನ್ನು ಕಾಣಬಹುದು . ವಂದನಾ ಈಗ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಡಿಎಂ ಆಗಿದ್ದಾರೆ.