ಸೋಲಾಪುರ, ಏ. 22(DaijiworldNews/AA): ಕೆಲವು ಯಶಸ್ಸಿನ ಕಥೆಗಳು ಕೇವಲ ವ್ಯಕ್ತಿಯ ಬದಲಿಗೆ ಇಡೀ ಕುಟುಂಬದ ತ್ಯಾಗವನ್ನು ಒಳಗೊಂಡಿರುತ್ತವೆ. ಹೀಗೆ ಸ್ವಾತಿ ಮೋಹನ್ ರಾಥೋಡ್ ಅವರು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರ ಕುಟುಂಬವೂ ಕೂಡ ಸಾಕಷ್ಟು ತ್ಯಾಗವನ್ನು ಮಾಡಿದೆ.
ಸ್ವಾತಿ ಮೋಹನ್ ರಾಥೋಡ್ ಅವರು ಮೂಲತಃ ಮಹಾರಾಷ್ಟ್ರದ ಸೋಲಾಪುರದವರು. ಸ್ವಾತಿ ಅವರು ತರಕಾರಿ ಮಾರಾಟಗಾರರ ಮಗಳಾಗಿದ್ದು, ಅವರಿಗೆ ಮೂವರು ಸಹೋದರಿಯರು ಹಾಗೂ ಓರ್ವ ಸಹೋದರನಿದ್ದಾನೆ. ಸ್ವಾತಿಯವರ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೂ ಅವರ ಕನಸಿಗೆ ಅಡ್ಡಿಯುಂಟಾಗಲಿಲ್ಲ.
ಸ್ವಾತಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸುತ್ತಾರೆ. ಆದರೆ ಮುಂಬೈ ನಗರವು ಅತ್ಯಂತ ದುಬಾರಿಯಾದ ಕಾರಣ ಸ್ವಾತಿ ಅವರ ಕುಟುಂಬ 400 ಕಿ.ಮೀ. ದೂರದ ಸೋಲಾಪುರಕ್ಕೆ ಸ್ಥಳಾಂತರಗೊಳ್ಳುತ್ತದೆ. ಸ್ವಾತಿ ಅವರು ಸೋಲಾಪುರದ ವಾಲ್ಚಂದ್ ಕಾಲೇಜಿನಲ್ಲಿ ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸುತ್ತಾರೆ.
ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುವ ಸಮಯದಲ್ಲಿ ಆಕೆಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವ ಹಂಬಲ ಮೂಡುತ್ತದೆ. ಬಳಿಕ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಸ್ವಾತಿ ಅವರು 5 ಪ್ರಯತ್ನಗಳ ಬಳಿಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ.
2023ರಲ್ಲಿ 5 ನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದ ಸ್ವಾತಿ ಅವರು 492ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಹಲವಾರು ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.