ಬಿಹಾರ, ಏ.20(DaijiworldNews/AA): ಬಿಜೆಪಿ-ಆರ್ಎಸ್ಎಸ್ ಸಂವಿಧಾನವನ್ನು ರದ್ದುಗೊಳಿಸಲು ಬಯಸುತ್ತಿದೆ. ದೇಶದ ಬಡವರು, ದಲಿತರು, ಬುಡಕಟ್ಟು ಜನಾಂಗದವರಿಗೆ ಸಿಕ್ಕಿದ ಸೌಲಭ್ಯಗಳೆಲ್ಲಾ ಸಂವಿಧಾನದಿಂದಾಗಿ ದೊರಕಿದೆ. ಒಂದು ವೇಳೆ ಸಂವಿಧಾನವನ್ನು ಬದಲಾಯಿಸಿದರೆ ಎಲ್ಲವೂ ಕೊನೆಗೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರವು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಆದರೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ 'ಇಂಡಿಯಾ' ಮೈತ್ರಿಕೂಟ ಹೋರಾಡುತ್ತಿದೆ. ಬಿಜೆಪಿಯ ಎಲ್ಲಾ ಯತ್ನವನ್ನು ವಿಫಲಗೊಳಿಸಲಿದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿದೆ. ಆದರೆ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿಗೆ ಸಾಧ್ಯವಾಗುವುದಿಲ್ಲ. ಮೋದಿ ಸರ್ಕಾರ ಶ್ರೀಮಂತರ ಪರವಾಗಿದ್ದು, ಶೇ 70ರಷ್ಟು ಜನಸಂಖ್ಯೆ ಹೊಂದಿರುವುದಕ್ಕೆ ಸಮಾನವಾದ ಸಂಪತ್ತು ಕೇವಲ 22 ಜನರಲ್ಲಿ ಇದೆ. ಇದನ್ನು ಬದಲಾಯಿಸಲು ನಾವು ಬಯಸುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.