ಬೆಂಗಳೂರು, ಏ. 20(DaijiworldNews/AA): ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಪಾಯಕ್ಕೆ ದೂಡಿದೆ. ಈ ಸರ್ಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಪಾಠ ಕಲಿಸಲೇಬೇಕು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ವಿವಿಧೆಡೆಯ ಅಪರಾಧ ಕೃತ್ಯಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ಬಿಜೆಪಿ, ಕರ್ನಾಟಕವನ್ನು ಅಪಾಯಕ್ಕೆ ದೂಡಿದ ಸಿದ್ದರಾಮಯ್ಯ ಸರ್ಕಾರ. ಜಿಹಾದಿ ಮತಾಂಧರಿಂದ ನಡೆದ ಕೊಲೆ, ಹಲ್ಲೆ, ದಬ್ಬಾಳಿಕೆಗಳು ಎಂದು ಉಲ್ಲೇಖಿಸಿರುವ ಬಿಜೆಪಿ ಅಪರಾಧ ಪ್ರಕರಣಗಳ ಪಟ್ಟಿ ಮಾಡಿದೆ.
ಆ ಪಟ್ಟಿಯಲ್ಲಿ ಹುಬ್ಬಳ್ಳಿ: ಲವ್ ಜಿಹಾದ್ ಗೆ ಒಪ್ಪದ ಕಾಂಗ್ರೆಸ್ ಪಾಲಿಕೆ ಸದಸ್ಯನ ಪುತ್ರಿಯ ಕೊಲೆ, ಬೆಂಗಳೂರು: ಕನ್ನಡ ಮಾತನಾಡಿದ್ದಕ್ಕೆ ನಟ, ನಟಿ ಮೇಲೆ ದಬ್ಬಾಳಿಕೆ, ಮಡಿಕೇರಿ: ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ಕಾರು ಹರಿಸಿದ ಮತಾಂಧ- ಓರ್ವನ ಹತ್ಯೆ, ಚಿತ್ರದುರ್ಗ: ಸಹದ್ಯೋಗಿಯನ್ನು ಡ್ರಾಪ್ ಮಾಡಿದ ಯುವಕನಿಗೆ ಥಳಿತ, ಬಾದಾಮಿ: ಹಿಂದೂ ಸಹೋದರರ ಮೇಲೆ ಮತಾಂಧರಿಂದ ಹಲ್ಲೆ, ಚನ್ನಗಿರಿ: ರಾಮನವಮಿ ದಿನ ಹಿಂದೂ ಯುವಕರ ಮೇಲೆ ಜಿಹಾದಿಗಳಿಂದ ಕೊಲೆ ಯತ್ನ, ವಿದ್ಯಾರಣ್ಯಪುರ: ರಾಮನವಮಿ ದಿನ ಕಾರು ತಡೆದು ಪಾಕ್ ಪರ ಘೋಷಣೆ ಹಾಕುವಂತೆ ಯುವಕರ ಮೇಲೆ ಹಲ್ಲೆ, ಮೈಸೂರು: ಮೋದಿ ಹಾಡು ತೋರಿಸಿದ್ದಕ್ಕೆ ಜಿಹಾದಿಗಳಿಂದ ಹಿಗ್ಗಾಮುಗ್ಗ ಥಳಿತ, ಮಾವಳ್ಳಿಪುರ: ನೈಜೀರಿಯಾ ಪ್ರಜೆಗಳಿಂದ ಪೊಲೀಸರ ಮೇಲೆ ಹಲ್ಲೆ, ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಎಂದು ಉಲ್ಲೇಖಿಸಿದೆ.
ಇನ್ನು ಕರ್ನಾಟಕವನ್ನು ಮರಳಿ ಪಡೆಯಬೇಕೆಂದರೆ, ಕಾಂಗ್ರೆಸ್ ಸರ್ಕಾರ ತೊಲಗಲೇಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲೇಬೇಕಿದೆ ಎಂದು ಬಿಜೆಪಿ ಕಿಡಿ ಕಾರಿದೆ.