ಹರಿಯಾಣ, ಏ 20(DaijiworldNews/AA): ಯುಪಿಎಸ್ ಸಿ ಪರೀಕ್ಷೆಯಲ್ಲಿ ಒಂದು ಬಾರಿ ಉತ್ತೀರ್ಣರಾಗುವುದೇ ಕಷ್ಟಸಾಧ್ಯವಾಗಿದೆ. ಆದರೆ ಮಮತಾ ಯಾದವ್ ಅವರು ಐಎಎಸ್ ಅಧಿಕಾರಿಯಾಗಬೇಕು ಎಂಬ ಉದ್ದೇಶದಿಂದ 2 ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.
ಮಮತಾ ಯಾದವ್ ಅವರು ಮೂಲತಃ ಹರಿಯಾಣದ ಬಸಾಯಿ ಗ್ರಾಮದವರು. ಮಮತಾ ಅವರ ತಂದೆ ಅಶೋಕ್ ಯಾದವ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಗೃಹಿಣಿ. ದೆಹಲಿಯ ಜಿಕೆಯ ಬಲ್ವಂತ್ ರಾಯ್ ಮೆಹ್ತಾ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ದೆಹಲಿಯ ಡಿಯು ಹಿಂದೂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ.
ಬಳಿಕ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. 2019 ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದ ಮಮತಾ ಅವರು 556ನೇ ರ್ಯಾಂಕ್ ಪಡೆಯುವ ಮೂಲಕ ಉತ್ತೀರ್ಣರಾಗುತ್ತಾರೆ. ಆದರೆ ಅವರು ಐಎಎಸ್ ಅಧಿಕಾರಿಯಾಗಲು ಸಾಧ್ಯವಾಗುವುದಿಲ್ಲ. ಕೇವಲ ಐಆರ್ ಎಸ್ ಗೆ ಮಾತ್ರ ಅರ್ಹತೆಯನ್ನು ಹೊಂದುತ್ತಾರೆ. ಹೀಗಾಗಿ ಆ ಬಳಿಕ 2020 ರಲ್ಲಿ ಪುನಃ ಯುಪಿಎಸ್ ಸಿ ಪರೀಕ್ಷೆ ಬರೆದ ಮಮತಾ ಅವರು 5 ನೇ ರ್ಯಾಂಕ್ ಪಡೆಯುತ್ತಾರೆ. ಈ ಮೂಲಕ ಅವರ ಗ್ರಾಮದ ಮೊದಲ ಐಎಎಸ್ ಅಧಿಕಾರಿಯಾಗುತ್ತಾರೆ.
ಮಮತಾ ಅವರು ಪ್ರತಿದಿನ 10 ರಿಂದ 12 ಗಂಟೆ ಕಠಿಣ ಅಧ್ಯಯನ ನಡೆಸುತ್ತಿದ್ದರು. ಇನ್ನು ಮಮತಾ ಅವರ ಯಶಸ್ಸಿಗೆ ಅವರ ಪೋಷಕರು ಅಪಾರ ಬೆಂಬಲವನ್ನು ನೀಡಿದರು. ಪೋಷಕರ ಬೆಂಬಲ ಹಾಗೂ ತನ್ನ ಕಠಿಣ ಪರಿಶ್ರಮದ ಮೂಲಕ ಮಮತಾ ಅವರು ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.