ನವದೆಹಲಿ, ಏ. 19(DaijiworldNews/AA): ಜಾಮೀನು ಪಡೆಯಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳುತ್ತಿದ್ದಾರೆ ಎಂದು ಇಡಿ ಆರೋಪಿಸಿತ್ತು. ಇದೀಗ ಈ ಆರೋಪಕ್ಕೆ ಕೇಜ್ರಿವಾಲ್ ಅವರು ತಿರುಗೇಟು ನೀಡಿದ್ದಾರೆ.
ಕೇಜ್ರಿವಾಲ್ ಅವರ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆ ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಗೆ ಅನುಮತಿ ನೀಡಲಾಗಿತ್ತು. ಕೇಜ್ರಿವಾಲ್ ಅವರು ಇನ್ಸುಲಿನ್ ಪಡೆಯಲು ಅನುಮತಿ ನೀಡುವಂತೆ ಕೋರಿ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಇಡಿ ಆರೋಪಗಳಿಗೆ ಉತ್ತರಿಸಿದ ಕೇಜ್ರಿವಾಲ್ ಪರ ವಕೀಲರು, 'ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ ಅಂಶವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಮನೆಯಿಂದ ಕಳುಹಿಸಿದ 48 ಊಟಗಳಲ್ಲಿ ಕೇವಲ ಮೂರು ಬಾರಿ ಮಾತ್ರ ಮಾವಿನ ಹಣ್ಣನ್ನು ನೀಡಲಾಗಿತ್ತು' ಎಂದು ವಾದ ಮಂಡಿಸಿದ್ದಾರೆ.
ಇನ್ನು ಕೇಜ್ರಿವಾಲ್ ಅವರು ಸಕ್ಕರೆ ರಹಿತ ಚಹಾ ಸೇವಿಸುತ್ತಾರೆ ಜೊತೆಗೆ ಬಿಳಿ ಅನ್ನದ ಬದಲು ಕಂದು ಬಣ್ಣದ ಅನ್ನವನ್ನು ಸೇವಿಸುತ್ತಿದ್ದಾರೆ. ಈ ಎಲ್ಲವನ್ನು ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾಡುತ್ತಿದ್ದಾರೆ. ಅದಾಗ್ಯೂ ಮಾಧ್ಯಮಗಳ ಗಮನ ಸೆಳೆಯಲು ಇಡಿ ಕ್ಷುಲ್ಲಕ ಆರೋಪ ಮಾಡುತ್ತಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದಿಸಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಇಡಿ ಪರ ವಕೀಲರು, ವೈದ್ಯರು ಸೂಚಿಸುವ ಡಯೆಟ್ ಗೂ ಕೇಜ್ರಿವಾಲ್ ಅವರು ಸೇವಿಸುವ ಆಹಾರಕ್ಕೂ ಹೊಂದಿಕೆಯಾಗುತ್ತಿಲ್ಲ, ವೈದ್ಯರ ಡಯೆಟ್ ಸಾಕಷ್ಟು ನಿಯಂತ್ರಿತ ಮತ್ತು ಕಟ್ಟುನಿಟ್ಟಾಗಿದೆ ಅಲ್ಲಿ ಎಲ್ಲೂ ಸಿಹಿ ತಿನಿಸು ಸೇವಿಸಲು ಸೂಚಿಸಿಲ್ಲ ಆದರೆ ಅವರು ಸೇವಿಸುತ್ತಿದ್ದಾರೆ ಎಂದರು.