ನವದೆಹಲಿ, ಏ 19 (DaijiworldNews/MS): ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರನ್ನು ನೇಮಕಗೊಂಡಿದ್ದಾರೆ. ಪ್ರಸ್ತುತ ನೌಕಾಪಡೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ತ್ರಿಪಾಠಿ ಅವರು ವೈಸ್ ಅಡ್ಮಿರಲ್ ಆರ್ ಹರಿ ಕುಮಾರ್ ಅವರ ನಂತರ ಏಪ್ರಿಲ್ 30 ರಂದು ತಮ್ಮ ಹೊಸ ಜವಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.40 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅಡ್ಮಿರಲ್ ದಿನೇಶ್ ಇದೀಗ ನೌಕಾಪಡೆಯ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ.
ತ್ರಿಪಾಠಿ ಪ್ರಸ್ತುತ ನೌಕಾಪಡೆಯ ಉಪ ಮುಖ್ಯಸ್ಥರಾಗಿದ್ದಾರೆ. ಗುರುವಾರ ಹೊರಡಿಸಿದ ಹೇಳಿಕೆಯ ಪ್ರಕಾರ, ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಏಪ್ರಿಲ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ನೌಕಾಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಅಡ್ಮಿರಲ್ ತ್ರಿಪಾಠಿ ಅವರು ಪಶ್ಚಿಮ ನೌಕಾ ಕಮಾಂಡ್ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಸೇವೆ ಸಲ್ಲಿಸಿದರು. ತ್ರಿಪಾಠಿ ಅವರು ಅಡ್ಮಿರಲ್ ಆರ್ ಹರಿಕುಮಾರ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ, 15 ಮೇ 1964 ರಂದು ಜನಿಸಿದ್ದು, ಜುಲೈ 1, 1985 ರಂದು ನೌಕಾಪಡೆಗೆ ಸೇರಿದರು. ಅವರು ರೇವಾದ ಸೈನಿಕ್ ಸ್ಕೂಲ್ ಮತ್ತು ಖಡ್ಗ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ದಿನೇಶ್ ತ್ರಿಪಾಠಿ ಅವರು ಸಂವಹನ ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಪರಿಣಿತರಾಗಿರುವ ಇವರು, ಸುಧಾರಿತ ನೌಕಾ ಹಡಗುಗಳಲ್ಲಿ ಸಿಗ್ನಲ್ ಕಮ್ಯುನಿಕೇಷನ್ ಅಧಿಕಾರಿ ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ವೈಸ್ ಅಡ್ಮಿರಲ್ ತ್ರಿಪಾಠಿ ಅವರು ತಮ್ಮ ಅತ್ಯುತ್ತಮ ಸೇವೆಗಾಗಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ನೌಕಾಪಡೆಯ ಪದಕವನ್ನು ಪಡೆದಿದ್ದಾರೆ.