ಥಾಣೆ, ಏ. 19(DaijiworldNews/AA): ಪಾಲಿಕೆಯಲ್ಲಿ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯ ಮಗನೊಬ್ಬ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾದ ಪ್ರಶಾಂತ್ ಸುರೇಶ್ ಭೋಜನೆ ಅವರ ಯಶೋಗಾಥೆ ಇದು.
ಪ್ರಶಾಂತ್ ಅವಾರ ತಾಯಿ ಮಹಾರಾಷ್ಟ್ರದ ಥಾಣೆ ಪಾಲಿಕೆಯಲ್ಲಿ ತಾಯಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರೆ, ತಂದೆ ಡಿ ದರ್ಜೆ ನೌಕರರಾಗಿದ್ದಾರೆ.
ಪ್ರಶಾಂತ್ ಅವರು ಎಂಜಿನಿಯರಿಂಗ್ ಓದಿದ್ದು, ಆ ಕ್ಷೇತ್ರದಲ್ಲಿ ಮುಂದುವರಿಯಲು ಇಷ್ಟವಿಲ್ಲದೆ ಯುಪಿಎಸ್ ಸಿ ಬರೆಯಲು ನಿರ್ಧರಿಸುತ್ತಾರೆ. ಈ ವೇಳೆ ದೆಹಲಿಯಲ್ಲಿ ಕೆಲಸ ಮಾಡಿಕೊಂಡೇ ಯುಪಿಎಸ್ ಸಿ ಪರೀಕ್ಷಾ ತರಬೇತಿ ಪಡೆಯುತ್ತಿದ್ದರು. ತನ್ನ ಓದಿನ ಸಂಪೂರ್ಣ ಖರ್ಚನ್ನು ನಿಭಾಯಿಸುತ್ತಿದ್ದ ಪ್ರಶಾಂತ್ ಅವರು 2015ರಲ್ಲಿ ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಈ ಪರೀಕ್ಷೆಯಲ್ಲಿ ಅವರು ವಿಫಲರಾಗುತ್ತಾರೆ.
ಆ ಬಳಿಕ ಸತತ 7 ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಈ ವೇಳೆ ಪ್ರಶಾಂತ್ ಅವರ ಪೋಷಕರು ಮನೆಗೆ ಹಿಂದಿರುಗುವಂತೆ ಸೂಚಿಸಿದ್ದರು. ಆದರೆ, ಪ್ರಶಾಂತ್ ಅವರು ಹಠ ಬಿಡದೆ, ದೃತಿಗೆಡದೇ 9 ನೇ ಬಾರಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಪರೀಕ್ಷೆಯಲ್ಲಿ 849ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.