ಆನೇಕಲ್, ಏ. 18(DaijiworldNews/AA): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಕ್ಷುಲ್ಲಕ ರಾಜಕಾರಣ ಮಾಡುವುದಕ್ಕೆ ಹೆಸರುವಾಸಿ ಆದವರು. ಹೀಗಾಗಿ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಅವರ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮತ್ತು ಡಿಕೆ ಶಿವಕುಮಾರ್ ಕಲ್ಲು ಹೊಡೆದರು ಎಂದು ಆರೋಪಿಸುತ್ತಾರಲ್ಲವೇ, ಅವರ ಕುಟುಂಬದಲ್ಲಿ ಯಾರು ಕಲ್ಲು ಹೊಡೆದಿದ್ದಾರೆ ತೋರಿಸುತ್ತೇನೆ. ಯಾರ ಜಮೀನನ್ನು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದರು.
ಹಿಂದೊಮ್ಮ ಡಿಕೆ ಶಿವಕುಮಾರ್ ಆಸ್ತಿಗಾಗಿ 9 ವರ್ಷದ ಬಾಲಕಿಯನ್ನು ಅಪಹರಿಸಿ ಬೆದರಿಕೆ ಹಾಕಿದ್ದರು. ಆ ಮೂಲಕ ಮಹಿಳೆಯೊಬ್ಬರನ್ನು ಬೆದರಿಸಿ ಬೆಂಗಳೂರು ಮೈಸೂರು ಹೆದ್ದಾರಿ ಬಳಿ ಆಸ್ತಿ ಬರೆಸಿಕೊಂಡಿದ್ದರು. ಈ ವಿಚಾರದಲ್ಲಿ ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿಯೂ ಅವರಿಗೆ ಹಿನ್ನಡೆಯಾಗಿದೆ. ಇದಕ್ಕೆ ದಾಖಲೆಗಳು ಇವೆ ಎಂದು ಹಾಸನದಲ್ಲಿ ದೇವೇಗೌಡರು ಹೇಳಿಕೆ ನೀಡಿದ್ದರು.