ಮುಂಬೈ, ಏ. 18(DaijiworldNews/AA): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ದಂಪತಿಯ ಸುಮಾರು 98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಜುಹುದಲ್ಲಿರುವ ಅವರ ಫ್ಲ್ಯಾಟ್, ಪುಣೆಯಲ್ಲಿರುವ ಬಂಗಲೆ, ರಾಜ್ ಕುಂದ್ರಾ ಹೆಸರಲ್ಲಿರುವ ಶೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 2017ರಲ್ಲಿ 6600 ಕೋಟಿ ರೂಪಾಯಿಯನ್ನು ರಾಜ್ ಕುಂದ್ರಾ ಹಾಗೂ ಅವರ ಸಂಗಡಿಗರು ಬಿಟ್ ಕಾಯಿನ್ ಮೂಲಕ ಗಳಿಸಿದ್ದರು. ಇಷ್ಟೇ ಅಲ್ಲದೇ ತಿಂಗಳಿಗೆ ಶೇ. 10 ಪಾವತಿಸುವುದಾಗಿ ಜನರಿಗೆ ಆಮಿಷ ಒಡ್ಡಿದ್ದರು. ಇದನ್ನು ಬೃಹತ್ ಬಿಟ್ಕಾಯಿನ್ ಹಗರಣ ಎಂದು ಆರೋಪ ಮಾಡಲಾಗಿದೆ. ಬಿಟ್ಕಾಯಿನ್ ಪ್ರಕರಣದಿಂದ ರಾಜ್ ಕುಂದ್ರಾ ಸದ್ಯ 150 ಕೋಟಿ ಲಾಭ ಗಳಿಸುತ್ತಿದ್ದಾರೆ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಿಟ್ ಕಾಯಿನ್ ಹಗರಣದಲ್ಲಿ ರಾಜ್ ಕುಂದ್ರಾ ಜೊತೆಗೆ ಪತ್ನಿ ನಟಿ ಶಿಲ್ಪಾ ಶೆಟ್ಟಿ ಹೆಸರು ಕೂಡ ಕೇಳಿಬಂದಿತ್ತು. ಸಾವಿರಾರು ಕೋಟಿ ರೂಪಾಯಿ ಹಗರಣದ ಈ ಪ್ರಕರಣದಲ್ಲಿ ದಂಪತಿಗೆ ಇಡಿ 2018ರಲ್ಲಿ ಸಮನ್ಸ್ ನೀಡಿತ್ತು. ಜೊತೆಗೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿದ್ದ ಆರೋಪಿ ಅಮಿತ್ ಭಾರದ್ವಾಜ್ ಅವರನ್ನು ಬಂಧಿಸಲಾಗಿತ್ತು. ಇನ್ನು gatbitcoin.com ಎಂಬ ವೆಬ್ಸೈಟ್ನಿಂದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ ರಾಜ್ ಕುಂದ್ರಾಗೆ ಸಂಬಂಧಿಸಿದ್ದು, ಆದ್ದರಿಂದ ಅವರನ್ನು ವಿಚಾರಣೆ ಮಾಡಲಾಗಿತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಇಡಿ ಅಧಿಕಾರಿಗಳು, ರಾಜ್ ಕುಂದ್ರಾಗೆ ಸೇರಿದ 97.7 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಶಿಲ್ಪಾ ಶೆಟ್ಟಿ ಹೆಸರಿನಲ್ಲಿರುವ ಜುಹು ಮನೆ, ಪುಣೆಯಲ್ಲಿರುವ ನಿವಾಸ, ರಾಜ್ ಕುಂದ್ರಾ ಹೆಸರಲ್ಲಿರುವ ಇಕ್ವಿಟಿ ಷೇರುಗಳನ್ನು ಸೀಜ್ ಮಾಡಲಾಗಿದೆ' ಎಂದು ತಿಳಿಸಿದೆ.