ಶ್ರೀನಗರ,ಏ. 16(DaijiworldNews/AK): ಗಂಡಾಬಾಲ್ನಿಂದ ಶ್ರೀನಗರದ ಬಟ್ವಾರಕ್ಕೆ ಶಾಲಾ ಮಕ್ಕಳು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಝೇಲಂ ನದಿಯಲ್ಲಿ ಮುಳುಗಿದ ಪರಿಣಾಮ ಮಂಗಳವಾರ ಬೆಳಗ್ಗೆ ನಾಲ್ವರು ಮೃತಪಟ್ಟಿದ್ದಾರೆ ಎಂದು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮುಜಾಫರ್ ಜರ್ಗರ್ ತಿಳಿಸಿದ್ದಾರೆ. ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ವಿಪತ್ತು ಪರಿಹಾರ ಪಡೆ ನಾಪತ್ತೆಯಾದ ಪ್ರಯಾಣಿಕರಿಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ದೋಣಿಯಲ್ಲಿ ಹಲವು ಶಾಲಾ ಮಕ್ಕಳು ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಯ ಹರಿವು ಹೆಚ್ಚಾಗಿದ್ದರಿಂದ ಈ ಘಟನೆ ನಡೆದಿದೆ. ಸೋಮವಾರ ಸಂಜೆ, ಶ್ರೀನಗರದ ಹವಾಮಾನ ಕೇಂದ್ರವು ಕಾಶ್ಮೀರ ವಿಭಾಗದ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಹೆಚ್ಚಿನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ ಮತ್ತು ಲಘು ಹಿಮದ ಮುನ್ಸೂಚನೆ ನೀಡಿತ್ತು.