ಬೆಂಗಳೂರು, ಏ 16 (DaijiworldNews/MS): ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ- ನಿರ್ದೇಶಕ ದ್ವಾರಕೀಶ್ ಹೃದಯಘಾತದಿಂದ ನಿಧನರಾಗಿದ್ದಾರೆ. 81ರ ವಯಸ್ಸಿನ ನಟ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನಟರಾಗಿ, ನಿರ್ಮಾಪಕರಾಗಿ ಹಲವಾರು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರೀಯರಾಗಿದ್ದರು. ಇವರ ನಿಧನದ ಸುದ್ದಿಯನ್ನು ಅವರ ಪುತ್ರ ಯೋಗೀಶ್ ಅವರು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
ಮೈಸೂರಿನ ಶಾರದಾ ವಿಲಾಸ್ ಮತ್ತು ಬಾನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ದ್ವಾರಕನಾಥ್, ಸಿಪಿಸಿ ಪಾಲಿಟೆಕ್ನಿಕ್ ಜತೆಗೆ ಡಿಪ್ಲೋಮೊ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಪದವಿ ಶಿಕ್ಷಣದ ನಂತರ ಸಹೋದರನ ಜತೆ ಸೇರಿ ಮೈಸೂರಿನಲ್ಲಿ “ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ತೆರೆಯುವ ಮೂಲಕ ಬದುಕು ಕಂಡುಕೊಂಡಿದ್ದರು. ನಟನೆ ಬಗ್ಗೆ ಅಪಾರ ಒಲವು ಹೊಂದಿದ್ದ ದ್ವಾರಕನಾಥ್ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರ ಬಳಿ ತಮ್ಮ ಮನದಾಳವನ್ನು ತೋಡಿಕೊಂಡಿದ್ದರು. ನಂತರ ತಮ್ಮ ವ್ಯಾಪಾರವನ್ನು ಅರ್ಧಕ್ಕೆ ಬಿಟ್ಟು, 1963ರಲ್ಲಿ ಹುಣಸೂರು ಅವರು ಚಿತ್ರರಂಗ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು.
ಆರಂಭದಲ್ಲಿ ಹಾಸ್ಯನಟನಾಗಿ, ಸಹ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ದ್ವಾರಕೀಶ್ 1966ರಲ್ಲಿ ಮೊದಲಿಗೆ ಮಮತೆಯ ಬಂಧನ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ ದೊಡ್ಡ ಮಟ್ಟದ ಹಿಟ್ ಹಾಗೂ ಚಿತ್ರರಂಗದಲ್ಲಿ ನೆಲೆಯೂರುವಂತೆ ಮಾಡಿದ್ದು 1969ರಲ್ಲಿ ಸ್ವತಂತ್ರವಾಗಿ ನಿರ್ಮಾಣ ಮಾಡಿದ್ದ ಮೇಯರ್ ಮುತ್ತಣ್ಣ ಸಿನಿಮಾ. 1969ರಿಂದ ಈವರೆಗೆ ದ್ವಾರಕೀಶ್ ಸುಮಾರು 47 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.