ಬೆಂಗಳೂರು, ಏ. 16(DaijiworldNews/AA): ರಾಜ್ಯದಲ್ಲಿ ಮತದಾನ ನಡೆಯುವ ಎರಡೂ ದಿನವೂ ಸರ್ಕಾರ ರಜೆ ಘೋಷಿಸಿದೆ. ಹೀಗಾಗಿ ಈ 2 ದಿನದಂದೂ ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಾಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡು ಹಂತದಲ್ಲಿ ಅಂದರೆ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ. ಸರ್ಕಾರವು ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಈ ಎರಡು ದಿನ ರಜೆ ಘೋಷಣೆ ಮಾಡಿದೆ. ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿ, ಅಲ್ಲಿನ ಸಿಇಒ ಮತ್ತು ಆಡಳಿತ ಮಂಡಳಿಯವರನ್ನು ಭೇಟಿ ಮಾಡಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ತಿಳಿಸಿದ್ದೇವೆ ಎಂದರು.
ಇನ್ನು ಖಾಸಗಿ ಕಂಪನಿಗಳ ಮಾಲಿಕರನ್ನು ಭೇಟಿ ಮಾಡುವುದರ ಜೊತೆಗೆ ಸಾಧ್ಯವಾದರೆ ಸಿಬ್ಬಂದಿಗಳಿಗೆ ಮತಗಟ್ಟೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ವರ್ಕ್ ಫ್ರಮ್ ಹೋಮ್ ಮಾಡುವಂತೆ ಕಂಪನಿಗಳು ಸಿಬ್ಬಂದಿಗೆ ಹೇಳುವಂತಿಲ್ಲ. ಕಡ್ಡಾಯವಾಗಿ ಕಂಪನಿಗಳು ಸಿಬ್ಬಂದಿಗೆ ರಜೆ ನೀಡಲೇಬೇಕು. ಒಂದು ವೇಳೆ ರಜೆ ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ.