ನವದೆಹಲಿ, ಏ. 15(DaijiworldNews/AK): ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏ.29ಕ್ಕೆ ಮುಂದೂಡಿದೆ.
ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ (ED) ನೋಟಿಸ್ ನೀಡಿದ್ದು ಏಪ್ರಿಲ್ 24 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ.
ದೆಹಲಿ ಮದ್ಯ ನೀತಿಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಬಂಧಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಡಿ ಬಂಧನ ಕಾನೂನು ವ್ಯಾಪ್ತಿಯಲ್ಲಿದೆ. ಪ್ರಕರಣವನ್ನು ರಾಜಕೀಯಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿತ್ತು.
ಹೈಕೋರ್ಟ್ನಲ್ಲಿ ಅರ್ಜಿ ವಜಾ ಆದ ಹಿನ್ನಲೆ ಕೇಜ್ರಿವಾಲ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು. ಅಲ್ಲದೇ ಇಡಿಗೆ ನೋಟಿಸ್ ಜಾರಿ ಮಾಡಿ ಸುದೀರ್ಘ ವಿಚಾರಣೆ ನಡೆಸುವುದಾಗಿ ಹೇಳಿತು.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಶುಕ್ರವಾರ ಸಣ್ಣ ದಿನಾಂಕವನ್ನು ಕೋರುತ್ತಿದ್ದೇನೆ ಈ ಪ್ರಕರಣದಲ್ಲಿ ಆಯ್ದ ಸೋರಿಕೆಗಳಿವೆ ಎಂದು ಹೇಳಿದರು. ಇದಕ್ಕೆ ಜಸ್ಟಿಸ್ ಖನ್ನಾ ನಿಮಗೆ ಒಂದು ಸಣ್ಣ ದಿನಾಂಕವನ್ನು ನೀಡುತ್ತೇನೆ ಆದರೆ ನೀವು ಸೂಚಿಸಿದ ದಿನಾಂಕ ಸಾಧ್ಯವಿಲ್ಲ ಎಂದು ಉತ್ತರಿಸಿದರು.
ಬಳಿಕ ಕೇಜ್ರಿವಾಲ್ ಅವರನ್ನ ಎನ್ಫೋರ್ಸ್ಮೆಂಟ್ ಕೇಸ್ ಮಾಹಿತಿ ವರದಿ (ಇಸಿಐಆರ್) ಅಥವಾ ಚಾರ್ಜ್ಶೀಟ್ನಲ್ಲಿ ಬಂಧಿಸಿಲ್ಲ. ಬದಲಿಗೆ ಇತರೆ ಆರೋಪಿಗಳ 15 ಹೇಳಿಕೆಗಳ ಮೇಲೆ ಬಂಧಿಸಿದೆ. ಚುನಾವಣಾ ಪ್ರಚಾರದಿಂದ ತಪ್ಪಿಸಲು ಬಂಧನ ಮಾಡಲಾಗಿದೆ ಎಂದು ಸಿಂಘ್ವಿ ಹೇಳಿದರು.