ಬೆಂಗಳೂರು, ಏ. 15(DaijiworldNews/AA): ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಎಂದಿದ್ದೇನೆ. ಆದರೆ ಕಾಂಗ್ರೆಸ್ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗ್ಯಾರೆಂಟಿ ಯೋಜನೆಯಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೆಚ್ ಡಿಕೆ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಇತ್ತೀಚೆಗೆ ನಾನು ತುಮಕೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಹಲವಾರು ವಿಷಯಗಳನ್ನ ಪ್ರಸ್ತಾಪ ಮಾಡಿದ್ದೆ. ಮಹಿಳಾ ತಾಯಂದಿರ ಬಗ್ಗೆ ಕ್ಷಮೆ ಕೇಳಲು ಆಗದ ರೀತಿ ಅಪಮಾನ ಮಾಡಿದ್ದೇನೆ ಎಂದು ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಸಭೆ ನಡೆಸಿದ್ದಾರೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ದುಃಖ ಆಗಿದ್ದರೆ ಈಗಲೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಇನ್ನು ಇಂದಿರಾಗಾಂಧಿ ಹತ್ಯೆಯಾದ ವೇಳೆ ದುಃಖಪಟ್ಟಿದ್ದು ಬಿಟ್ಟು ಈಗಲೇ ದುಃಖಪಟ್ಟೆ ಎಂದು ಅಧ್ಯಕ್ಷರು, ಮಹಿಳೆಯರ ಪರ ಕಂಬನಿ ಮಿಡಿದಿದ್ದಾರೆ. ಡಿಕೆ ಶಿವಕುಮಾರ್ಗೆ ಕೇಳ್ತೀನಿ, ಕೆಲವು ಹೆಣ್ಣುಮಕ್ಕಳನ್ನ ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡಾಗ ಇವರಿಗೆ ದುಃಖ ಬಂದಿಲ್ಲ ಪಾಪ. ಇದೆಲ್ಲವನ್ನು ನಾನು ಕಂಡಿದ್ದೇನೆ ಎಂದು ಕಿಡಿಕಾರಿದ್ದಾರೆ.