ಮೈಸೂರು, ಏ. 14(DaijiworldNews/AA): ಕಾಂಗ್ರೆಸ್ ಪಕ್ಷವು ತುಕ್ಡೇ ತುಕ್ಡೆ ಗ್ಯಾಂಗಿನ ಭಾಗವಾಗಿದೆ. ದೇಶದ ವಿಭಜನೆ ಮಾಡುವ ಪಕ್ಷವದು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರ ಮೈಸೂರಿನಲ್ಲಿ 'ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ' ಸಂಬಂಧಿತ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಕಿ ಗ್ಯಾರಂಟಿಯೇ ಬಿಜೆಪಿ ಸಂಕಲ್ಪಪತ್ರ. 3 ಕೋಟಿ ಹೊಸ ಮನೆ ನಿರ್ಮಾಣ, ಬಡವರಿಗೆ 5 ವರ್ಷ ಉಚಿತ ಪಡಿತರ, 70 ವರ್ಷಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ಮಾಡುತ್ತೇವೆ ಎಂದರು.
ಭವಿಷ್ಯದ ಬದಲಾವಣೆಯನ್ನು ಸಂಕಲ್ಪಪತ್ರವು ಅನಾವರಣಗೊಳಿಸಿದೆ. ಎಕ್ಸ್ಪ್ರೆಸ್ ವೇ, ವಾಟರ್ ವೇ, ಏರ್ ವೇ ಮೂಲಕ ಭಾರತವು ವಿಶ್ವದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಭಾರತವು ಹಿಂದೆ ತಂತ್ರಜ್ಞಾನಕ್ಕಾಗಿ ಬೇರೆ ದೇಶದತ್ತ ನೋಡುತ್ತಿತ್ತು. ಈಗ ಚಂದ್ರಯಾನವೂ ನಮ್ಮಿಂದ ನಡೆದಿದೆ. ಕಡಿಮೆ ದರದಲ್ಲಿ ಔಷಧಿ, ಕಡಿಮೆ ದರದಲ್ಲಿ ವಾಹನ ಉತ್ಪಾದನೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಕರ್ನಾಟಕವು ದೇಶದ ಐಟಿ, ತಂತ್ರಜ್ಞಾನದ ಹಬ್ ಆಗಿದೆ. ಇಲ್ಲಿನ ಯುವಕರಿಗೆ ಇದೆಲ್ಲದರ ಗರಿಷ್ಠ ಲಾಭ ಲಭಿಸಲಿದೆ ಎಂದು ಹೇಳಿದರು. ಕನ್ನಡಕ್ಕೆ ಮಾನ್ಯತೆ ಲಭಿಸಲಿದೆ. ವಿಕಾಸದ ಗ್ಯಾರಂಟಿಯನ್ನೂ ನಾವು ಕೊಟ್ಟಿದ್ದೇವೆ. ಮೈಸೂರು, ಹಂಪಿ, ಬಾದಾಮಿ ಮತ್ತಿತರ ಪ್ರದೇಶಗಳಿಗೆ ಪ್ರವಾಸೋದ್ಯಮದ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಲಿವೆ. ಇದೆಲ್ಲವೂ ಆಗಲು ಬಿಜೆಪಿ- ಎನ್ಡಿಎ ಅನಿವಾರ್ಯ. ಎನ್ಡಿಎ ಹೇಳಿದ್ದನ್ನು ಮಾಡುತ್ತದೆ. 370ನೇ ವಿಧಿ ರದ್ದು, ತ್ರಿವಳಿ ತಲಾಖ್ ರದ್ದು, ಮಹಿಳಾ ಮೀಸಲಾತಿ, ರಾಮಮಂದಿರ ನಿರ್ಮಾಣ- ಇವನ್ನು ನಾವು ಹೇಳಿದ್ದಲ್ಲದೆ ಮಾಡಿ ತೋರಿಸಿದ್ದೇವೆ ಎಂದು ತಿಳಿಸಿದರು. ನಿಮ್ಮ ಒಂದು ಮತದಿಂದ ಮೋದಿಕಿ ಗ್ಯಾರಂಟಿ ಶಕ್ತಿ ವೃದ್ಧಿಸುತ್ತದೆ ಎಂದು ತಿಳಿಸಿದರು.
ದೇವೇಗೌಡರು, ಯಡಿಯೂರಪ್ಪಜೀ, ಕುಮಾರಸ್ವಾಮಿಯವರ ನಾಯಕತ್ವ ನಮ್ಮ ಜೊತೆಗಿದೆ. ರಾಷ್ಟ್ರಸೇವೆಗಾಗಿ ತಮ್ಮ ಮಕ್ಕಳನ್ನು ಕಳಿಸುವ ಕನಸು ಕಾಣುವವರ ನೆಲವಿದು. ಭಾರತ ವಿರೋಧಿ ಮಾತನಾಡುವವರಿಗೆ ಕಾಂಗ್ರೆಸ್ ಟಿಕೆಟ್ ಕೊಡುತ್ತದೆ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದನ್ನು ಆಕ್ಷೇಪಿಸಲಾಗಿತ್ತು. ಇಂಥ ಕಾಂಗ್ರೆಸ್ಸಿಗೆ ಮತ ಕೊಡುತ್ತೀರಾ? ಕಾಂಗ್ರೆಸ್ ಪಕ್ಷ ವಂದೇ ಮಾತರಂ ವಿರೋಧಿಯಾಗಿದೆ. ಕಾಂಗ್ರೆಸ್ ಪಕ್ಷವು ಆಡಳಿತಕ್ಕಾಗಿ ಬೆಂಕಿಯೊಡನೆ ಆಟವಾಡುತ್ತಿದೆ. ಕಾಂಗ್ರೆಸ್ಸಿನ ನಾಯಕರು ವಿದೇಶಗಳಲ್ಲಿ ಭಾರತವನ್ನು ಟೀಕಿಸುತ್ತಾರೆ ಎಂದು ಟೀಕಿಸಿದರು.
ಈ ಸಂದರ್ಭ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಂಸದ ಪ್ರತಾಪಸಿಂಹ, ಮೈಸೂರು-ಕೊಡಗು ಕ್ಷೇತ್ರದ ಯದುವೀರ್ ಒಡೆಯರ್, ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಂಸದೆ ಸುಮಲತಾ ಅಂಬರೀಷ್, ಜೆಡಿಎಸ್ ಮುಖಂಡರಾದ ಎಚ್.ಡಿ.ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸಹಿತ ಹಲವು ನಾಯಕರು ಪಾಲ್ಗೊಂಡಿದ್ದರು.