ಬೆಂಗಳೂರು, ಏ. 14(DaijiworldNews/AA): ನಾನು ಮಹಿಳೆಯರಿಗೆ ಅಪಮಾನ ಮಾಡಿಲ್ಲ. ಮುಗ್ಧ ಜನರನ್ನು, ಮಹಿಳೆಯರನ್ನು ಕಾಂಗ್ರೆಸ್ ನವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೇನೆಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ರಾಜ್ಯದಲ್ಲಿ ಸಾರಾಯಿ ನಿಷೇಧಿಸಿದ್ದೇನೆ. ಮಹಿಳೆಯರ ಬಗ್ಗೆ ನಾನು ಎಂದಿಗೂ ಕೇವಲವಾಗಿ ಮಾತನಾಡುವುದಿಲ್ಲ. ಅಸಡ್ಡೆಯಿಂದ ಕಂಡಿಲ್ಲ, ಅಪಮಾನವಾಗುವಂತೆ ಎಲ್ಲಿಯೂ ಮಾತನಾಡಿಲ್ಲ ಎಂದು ಹೇಳಿದರು.
ಈ ಬಗ್ಗೆ ಜೆಡಿಎಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಸತ್ಯವನ್ನು ವಕ್ರೀಕರಿಸುವುದು, ತಿರುಚುವುದು ಕಾಂಗ್ರೆಸ್ ಪಕ್ಷದ ಪುರಾತನ-ಪರಂಪರಾಗತ ಚಾಳಿ. 75 ವರ್ಷಗಳಿಂದ ಇದನ್ನೇ ಮಾಡಿಕೊಂಡು ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಆಳುತ್ತಿದೆ. ಈಸ್ಟ್ ಇಂಡಿಯಾ ಕಂಪನಿಯ ಆಧುನಿಕ ಅವತಾರವೇ ಕಾಂಗ್ರೆಸ್. ಜನರನ್ನು ರಣಹದ್ದಿನಂತೆ ಕಿತ್ತು ತಿನ್ನುತ್ತಿದೆ ಹಾಗೂ ಕರ್ನಾಟಕದಲ್ಲಿ ತನ್ನ ರಕ್ಕಸಭೋಜನ ಮುಂದುವರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.