ಬೆಂಗಳೂರು,ಏ. 14(DaijiworldNews/AK): ಗ್ಯಾರೆಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ.
ಮಹಿಳೆಯರ ಘನತೆಗೆ, ಚಾರಿತ್ರ್ಯಕ್ಕೆ ಕುಮಾರಸ್ವಾಮಿ ಅವರು ಧಕ್ಕೆ ತಂದಿದ್ದಾರೆ. ಈ ಹಿನ್ನಲೆ ಹೆಚ್ಡಿಕೆ ಹೇಳಿಕೆಯನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿ ಸುಮೋಟೋ ಪ್ರಕರಣ ದಾಖಲಿಸಿದ್ದು, ನೋಟಿಸ್ ಜಾರಿ ಮಾಡಲಿದೆ
ಏ.13ರಂದು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ವಿ.ಸೋಮಣ್ಣ ಪರ ಪ್ರಚಾರ ಭಾಷಣದಲ್ಲಿ ಹೆಚ್ಡಿ ಕುಮಾರಸ್ವಾಮಿ ಮಾತನಾಡಿ , ‘ಗ್ಯಾರಂಟಿಗಾಗಿ ಯಾವ ಜೇಬಿಗೆ ಕೈ ಹಾಕಿದ್ದಾರೆ ಎಂದು ಹೇಳುತ್ತಾ, ಇವತ್ತಿನ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯದ ಹಲವೆಡೆ ವಿರೋಧ ವ್ಯಕ್ತವಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ಡಿಕೆ, ಗ್ಯಾರಂಟಿ ಯೋಜನೆ ಹೆಸರಿನಲ್ಲಿ ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಮಹಿಳೆಯರನ್ನು ಅಪಮಾನ ಮಾಡಿಲ್ಲ. ಮುಗ್ಧ ಜನರನ್ನು, ಮಹಿಳೆಯರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದಿದ್ದೇನೆ. ಕಷ್ಟ ಎಂದು ಬಂದಾಗ ನಾನು ಆಶ್ರಯ ನೀಡಿದ್ದೇನೆ. ನಾನು ಸಿಎಂ ಆಗಿದ್ದಾಗ ಮಹಿಳೆಯರಿಗಾಗಿ ಸಾಕಷ್ಟು ಯೋಜನೆ ತಂದಿದ್ದೇನೆ. ಮಹಿಳೆಯರ ಕೂಗಿಗೆ ಸ್ಪಂದಿಸಿ ರಾಜ್ಯದಲ್ಲಿ ಸರಾಯಿ ನಿಷೇಧಿಸಿದ್ದೇನೆ. ಮಹಿಳೆಯರ ಬಗ್ಗೆ ನಾನು ಕೇವಲವಾಗಿ ಮಾತನಾಡುವುದಿಲ್ಲ. ಅಸಡ್ಡೆಯಿಂದ ಕಂಡಿಲ್ಲ, ಅಪಮಾನ ಆಗುವ ರೀತಿ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.