ಪುಣೆ, ಏ. 13(DaijiworldNews/AA): ಗಡಿಯಾಚೆಯಿಂದ ನಡೆಯುವ ಯಾವುದೇ ಭಯೋತ್ಪಾದನಾ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಉಗ್ರರಿಗೆ ಯಾವುದೇ ರೀತಿಯ ನಿಯಮಗಳಿರುವುದಿಲ್ಲ. ಆದ್ದರಿಂದ ಅವರಿಗೆ ನೀಡುವ ಉತ್ತರಕ್ಕೂ ಯಾವುದೇ ರೀತಿಯ ನಿಯಮವಿರುವುದಿಲ್ಲ ಎಂದು ಹೇಳಿದರು.
2008 ರಲ್ಲಿ ಮುಂಬೈ ಮೇಲೆ ದಾಳಿ ನಡೆಯಿತು. ಈ ದಾಳಿಯ ಬಳಿಕ ಪಾಕ್ ಮೇಲೆ ದಾಳಿ ಮಾಡಬೇಕಾ ಬೇಡವೇ ಎಂಬ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಸಾಕಷ್ಟು ಚರ್ಚೆ ನಡೆಯಿತು. ಕೊನೆಗೆ ಪಾಕ್ ಮೇಲೆ ದಾಳಿ ಮಾಡದೇ ಇರುವುದಕ್ಕಿಂತ ದಾಳಿ ಮಾಡುವ ವೆಚ್ಚ ಹೆಚ್ಚು ಎಂದು ಆ ವೇಳೆಯಲ್ಲಿ ತೀರ್ಮಾನಿಸಲಾಯಿತು. ಈಗ ಇದೇ ರೀತಿಯ ದಾಳಿ ನಡೆದರೆ ಮತ್ತು ಅದಕ್ಕೆ ಪ್ರತಿಕ್ರಿಯಿಸದಿದ್ದರೆ ಮುಂದಿನ ದಾಳಿಗಳನ್ನು ತಡೆಯುವುದು ಹೇಗೆ ಎಂದು ಅವರು ಪ್ರಶ್ನಿಸಿದರು.