ಬೆಂಗಳೂರು, ಏ. 18(DaijiworldNews/AA): ಭಾರತದ ನೈಜ ಹಿಟ್ಲರ್ ಅಂದ್ರೆ ಅದು ಕಾಂಗ್ರೆಸ್ ಪಕ್ಷ. ಯಾವ ಕಾರಣಕ್ಕೆ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು? ಇವರು ಮೋದಿ ಅವರನ್ನು ಹಿಟ್ಲರ್, ಮುಸೋಲಿನಿ ಅಂತ ಟೀಕಿಸುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಈ ದೇಶದ ರಿಯಲ್ ಹೀರೋ. ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಮೋದಿ ಅವರನ್ನು ಸರ್ವಾಧಿಕಾರಿ ಅಂದಿದ್ದನ್ನು ನಾವು ಖಂಡಿಸುತ್ತೇವೆ ಎಂದು ಕಿಡಿ ಕಾರಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಹೃದಯವಂತ ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಸಲಾಗಿದೆ. ಹೃದಯ ಇಲ್ಲದ ಡಿಕೆ ಸುರೇಶ್ ಕಾಣೆಯಾಗುತ್ತಾರೆ. ಹೃದಯವಂತರು ಬಂದಿರುವುದರಿಂದ ಹೃದಯ ಇಲ್ಲದ ಕಟುಕರು ಕಾಣೆಯಾಗುತ್ತಾರೆ ಎಂದರು.
ದೇಶದಲ್ಲಿ ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಮೋದಿ ತಿಳಿಸಿದ್ದಾರೆ. ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತಾರೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಸಂವಿಧಾನ ದೇಶದ ಪರಮೋಚ್ಛ. ಸಂವಿಧಾನದ ಮೇಲೆ ಕಾಂಗ್ರೆಸ್ ಪಕ್ಷದವರಿಗೆ ಗೌರವವಿಲ್ಲ ಎಂದು ಹೇಳಿದರು.