ಬಾಗಲಕೋಟೆ, ಏ. 18(DaijiworldNews/AA): ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾಡಿರುವ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ತ್ಯಜಿಸುವೆ ಎಂದು ಸಚಿವ ಶಿವಾನಂದ ಪಾಟೀಲ್ ತಿರುಗೇಟು ನೀಡಿದ್ದಾರೆ.
ಯತ್ನಾಳ್ ಅವರು ಸಚಿವ ಶಿವಾನಂದ ಸಕ್ಕರೆ ಕಾರ್ಖಾನೆಗಳಿಂದ 50 ಲಕ್ಷ ರೂ. ಕೇಳಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಾನಂದ ಅವರು, ನನ್ನ ಮೇಲಿನ ಆರೋಪವನ್ನು ಒಂದು ವೇಳೆ ಸಾಬೀತು ಪಡಿಸುವಲ್ಲಿ ಶಾಸಕ ಯತ್ನಾಳ್ ಅವರು ವಿಫಲರಾದರೆ ಅವರು ರಾಜಕೀಯ ಬಿಡಲಿ ಎಂದು ಸವಾಲೆಸೆಗಿದ್ದಾರೆ.
ವಿಜಯಪುರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಸವಾಲು ಹಾಕಿದ ಸಚಿವ ಶಿವಾನಂದ, ಒಂದು ವೇಳೆ ಯತ್ನಾಳ್ ನನಗಿಂತ ಒಂದೇ ಒಂದು ಮತ ಹೆಚ್ಚು ಗಳಿಸಿದರೂ ನಾನು ರಾಜಕೀಯ ನಿವೃತ್ತಿ ಪಡೆಯುವೆ ಎಂದರು.