ರಾಜಸ್ಥಾನ, ಏ 13(DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೂ ಸಾಕಷ್ಟು ಪರಿಶ್ರಮ ಅಗತ್ಯ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಲಕ್ಷಾಂತರ ಅಭ್ಯರ್ಥಿಗಳು ಪ್ರಯತ್ನ ಪಡುತ್ತಲೇ ಇರುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಉತ್ತೀರ್ಣರಾದ ಪರಿ ಬಿಷ್ಣೋಯ್ ಅವರ ಯಶೋಗಾಥೆ ಇದು.
ಪರಿ ಬಿಷ್ಣೋಯ್ ಅವರು ಮೂಲತಃ ರಾಜಸ್ಥಾನದ ಬಿಕಾನೇರ್ ನವರು. ಆಕೆಯ ತಂದೆ ವಕೀಲರು ಹಾಗೂ ತಾಯಿ ಜಿಆರ್ ಪಿ ಗಾಗಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ಬಿಷ್ಣೋಯ್ ಅವರು ಅಜ್ಮೀರ್ ನ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಮುಗಿಸುತ್ತಾರೆ. ಬಳಿಕ ಅವರು ಪದವಿ ಅಧ್ಯಯನವನ್ನು ದೆಹಲಿ ವಿಶ್ವವಿದ್ಯಾಲಯದ ಇಂದ್ರಪ್ರಸ್ಥ ಮಹಿಳಾ ಕಾಲೇಜಿಗೆ ತೆರಳುತ್ತಾರೆ. ಅದಕ್ಕಾಗಿ ಬಿಷ್ಣೋಯ್ ಅವರು ದೆಹಲಿಗೆ ಸ್ಥಳಾಂತರಗೊಳ್ಳುತ್ತಾರೆ. ಬಿಷ್ಣೋಯಿ ಅವರು ಅಜ್ಮೀರ್ ನ ಎಂಡಿಎಸ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ತಮ್ಮ ಸ್ನಾತಕೋತ್ತರ ಪದವಿ ಗಳಿಸುತ್ತಾರೆ.
ಸ್ನಾತಕೋತ್ತರ ಪದವಿ ಗಳಿಸಿದ ಬಳಿಕ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡುತ್ತಾರೆ. ಆ ಬಳಿಕ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಆದರೆ ಮೊದಲೆರಡು ಪ್ರಯತ್ನದಲ್ಲಿ ವಿಫಲರಾದ ಅವರು, 2019 ರಲ್ಲಿ ಮೂರನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 30 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ 23 ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.
ಬಿಷ್ಣೋಯ್ ಅವರು ಪ್ರಸ್ತುತ ಸಿಕ್ಕಿಂನ ಗ್ಯಾಂಗ್ಟಾಕ್ ನಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಈ ಹಿಂದೆ ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ಅನಿಲ ಸಚಿವಾಲಯದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು.