ಬೆಳಗಾವಿ, ಏ. 12 (DaijiworldNews/AA): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಂತೆ ನೋಡಿಕೊಳ್ಳುವುದು ಹಾಗೂ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸುವುದೇ ನಮ್ಮ ಗುರಿಯಾಗಿದೆ ಎಂದು ವಿದಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮತ್ತು ನ್ಯಾಯ ಯಾತ್ರೆ ವೇಳೆ, ಜನರಿಂದ ವ್ಯಕ್ತವಾದ ಅಭಿಪ್ರಾಯ ಆಧರಿಸಿ ಈ ಬಾರಿ ಕಾಂಗ್ರೆಸ್ ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಮ್ಮ ದೇಶ ಅಮೃತ ಕಾಲದತ್ತ ಸಾಗುತ್ತಿದೆ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ, ಕಳೆದ 10 ವರ್ಷಗಳಲ್ಲಿ ದೇಶದ ಜನರು ಅಮೃತ ಕಾಲ ನೋಡಿಲ್ಲ. ಅದರ ಬದಲಿಗೆ, ಅನ್ಯಾಯ ಕಾಲ ನೋಡಿದ್ದಾರೆ. ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ಜನರ ಯಾವ ಬೇಡಿಕೆಯನ್ನು ಸಹ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರೂಪಿಸುತ್ತಿರುವ ತಂತ್ರದಿಂದ 'ಇಂಡಿ' ಒಕ್ಕೂಟ ದುರ್ಬಲವಾಗಿದೆ. ಬಿಜೆಪಿ ವಿರುದ್ಧ ಎದ್ದಿರುವ ಧ್ವನಿ ಹತ್ತಿಕ್ಕಲು ಅವರು, ಇಡಿ, ಐಟಿ ಮತ್ತು ಸಿಬಿಐಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಬಿಜೆಪಿಯವರು ಕಾಂಗ್ರೆಸ್ ವಿರುದ್ಧವೂ ಆರೋಪ ಹೊರಿಸುತ್ತಿದ್ದಾರೆ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ, ರೈತರ ಕೃಷಿ ಸಾಲ, ಕೂಲಿ-ಕಾರ್ಮಿಕರ ಸಾಲ ಮನ್ನಾ ಮಾಡಿಲ್ಲ. ಆದರೆ, ಬಂಡವಾಳಶಾಹಿಗಳಿಗೆ ಸಾಲ ಮನ್ನಾದ ಲಾಭ ದೊರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.