ಶಿವಮೊಗ್ಗ, ಏ.12 (DaijiworldNews/AA): ರಾಜ್ಯ ಬಿಜೆಪಿಯನ್ನು ಅಪ್ಪ ಮಕ್ಕಳ ಮುಷ್ಟಿಯಿಂದ ಬಿಡಿಸಲು, ಹಿಂದೂತ್ವವನ್ನು ಪ್ರಖರವಾಗಿ ಪ್ರತಿಪಾದಿಸಲು ಮತ್ತು ರಾಜ್ಯ ಬಿಜೆಪಿಯನ್ನು ಶುದ್ಧೀಕರಿಸಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ ಎಂದು ಶಿವಮೊಗ್ಗ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು ಯಾರೇ ಬಂದರೂ ನಾಮಪತ್ರ ಸಲ್ಲಿಸುವುದು ಖಚಿತ ಎಂದು ಹೇಳಿದ್ದೆ. ನನ್ನ ಮಾತು ಮತ್ತು ಹಟದಂತೆ ಇಂದು ನಾಮಪತ್ರ ಸಲ್ಲಿಸಿದ್ದೇನೆ. ಅಪ್ಪ ಮಕ್ಕಳಿಂದ ರಾಜ್ಯ ಬಿಜೆಪಿಯನ್ನು ಮುಕ್ತಮಾಡಬೇಕೆಂದು ಸಂಕಲ್ಪ ತೊಟ್ಟವರೆಲ್ಲ ಇಂದು ನನ್ನೊಂದಿಗೆ ಕೈ ಜೋಡಿಸಿದ್ದಾರೆ ಎಂದರು.
ತನ್ನ ಬೆಂಬಲಿಗರು ಇಲ್ಲಿಗೆ ಬರದಂತೆ ತಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾರೆ, ಆದರೂ ಅವರೆಲ್ಲ ಬಹಳ ಕಷ್ಟಪಟ್ಟು ಬಂದಿದ್ದಾರೆ ಎಂದು ಅವರು ತಿಳಿಸಿದರು. ಇನ್ನು ನಾಮಪತ್ರ ಸಲ್ಲಿಸುವ ವೇಳೆ ನಡೆದ ಮೆರವಣಿಗೆಯಲ್ಲಿ ಸುಮಾರು 35,000 ಬೆಂಬಲಿಗರು ಪಾಲ್ಗೊಂಡಿದ್ದರು.