ನವದೆಹಲಿ, ಏ. 12 (DaijiworldNews/AA): ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ ಸುರಕ್ಷಿತ ಸ್ವರ್ಗವಾಗಿದೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ದೀದಿ ಸರ್ಕಾರವನ್ನು ಟೀಕಿಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಬಾಂಬರ್ ಪಶ್ಚಿಮ ಬಂಗಾಳದಲ್ಲಿ ಬಂಧನಕ್ಕೊಳಗಾಗಿರುವ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆಫೆ ಸ್ಫೋಟಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಅರೆಸ್ಟ್ ಮಾಡಲಾಗಿದೆ. ದುರದೃಷ್ಟವಶಾತ್ ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಭಯೋತ್ಪಾದಕರಿಗೆ ಪಶ್ಚಿಮ ಬಂಗಾಳ ಸುರಕ್ಷಿತ ಸ್ವರ್ಗವಾಗಿದೆ ಎಂದು ಹೇಳಿದ್ದಾರೆ.
ಇನ್ನು ಅಮಿತ್ ಮಾಳವಿಯ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಂಗಾಳ ಪೊಲೀಸರು, ಪಶ್ಚಿಮ ಬಂಗಾಳ ಎಂದೂ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿಲ್ಲ. ರಾಜ್ಯ ಪೊಲೀಸರು ತನ್ನ ಜನರನ್ನು ಕೆಟ್ಟ ಚಟುವಟಿಕೆಗಳಿಂದ ಸುರಕ್ಷಿತವಾಗಿರಿಸುವಲ್ಲಿ ಸದಾ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಸತ್ಯವು ಅತ್ಯಂತ ಕೆಟ್ಟದಾಗಿದೆ. ಕೆಫೆ ಬಾಂಬ್ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ನಮ್ಮ ಪೊಲೀಸರೂ ಸಹಕಾರ ನೀಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.