ಶಿವಮೊಗ್ಗ, ಏ. 12(DaijiworldNews/AK): ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದು, ಇಂದು (ಏ.12) ನಾಮಪತ್ರ ಸಲ್ಲಿಸಿದರು.
ಬೃಹತ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ಪುತ್ರ ಕಾಂತೇಶ್ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಬಿಜೆಪಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ವಿರೋಧಿಸಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ
ಈ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ನಾನು ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತೇನೆ ಎಂದು ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ. ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪ್ರತಿ ಮನೆ ಮನೆಗೆ ಹೋಗಿ ಈಶ್ವರಪ್ಪ ಏಕೆ ಚುನಾವಣೆಗೆ ನಿಂತಿದ್ದಾರೆ, ಏನು ಅನ್ಯಾಯ ಆಗಿದೆ ಅಂತ ನಮ್ಮ ಕಾರ್ಯಕರ್ತರು ತಿಳಿಸುತ್ತಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಏಕೆ ಇದೆ? ಚುನಾವಣೆ ಬಳಿಕ ನಂತರ ಬಿಜೆಪಿಯಲ್ಲಿ ಕೆಲವು ಬದಲಾವಣೆ ಆಗುತ್ತದೆ. ಪಕ್ಷ ಶುದ್ದೀಕರಣ ಆಗುವ ವಿಶ್ವಾಸ ಇದೆ ಎಂದು ನಾಮಪತ್ರ ಸಲ್ಲಿಕೆ ಬಳಿಕ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.